Advertisement

ಮುದುಕ ಮತ್ತು ಶವ ಪೆಟ್ಟಿಗೆ

10:26 AM Dec 08, 2019 | mahesh |

ಬದುಕಿಡೀ ಹೊಲದಲ್ಲಿ ದುಡಿದು ಬದುಕು ಕಟ್ಟಿಕೊಂಡ ರೈತನೊಬ್ಬ ಕೊನೆಗಾಲದಲ್ಲಿ ತುಂಬಾ ದುರ್ಬಲನಾಗಿಬಿಟ್ಟ. ವಯಸ್ಸು 90 ದಾಟಿತ್ತು. ಮನೆಯ ಮುಂದಿನ ಕಲ್ಲುಬಂಡೆಯ ಮೇಲೆ ಕುಳಿತು ಹೊತ್ತು ಕಳೆಯುವುದಷ್ಟೇ ಆತನ ದಿನಚರಿಯಾಗಿ ಬದಲಾಗಿತ್ತು. ಆತನ ಮಗ ಈಗ ಹೊಲದಲ್ಲಿ ದುಡಿಯಲಾರಂಭಿಸಿದ್ದ. ಆದರೆ ಅವನಿಗೆ ತನ್ನ ಅಪ್ಪನ ದೇಖರೇಖೀ ನೋಡಿಕೊಳ್ಳುವುದಕ್ಕೆ ಮನಸ್ಸೇ ಇರಲಿಲ್ಲ.

Advertisement

“”ಅಪ್ಪನಿಗೆ ವಯಸ್ಸಾಗಿದೆ. ಈತನಿಂದ ನಮಗೆ ಪುಡಿಗಾಸಿನ ಪ್ರಯೋಜನವೂ ಇಲ್ಲ. ಹೀಗೇ ಬಿಟ್ಟರೆ ಇನ್ನೂ ಹೊರೆಯಾಗುತ್ತಲೇ ಹೋಗುತ್ತಾನೆ” ಎಂದು ಅಂದುಕೊಂಡ ಮಗ, ಒಂದು ದಿನ ಸಿಟ್ಟಿನ ಭರದಲ್ಲಿ ಶವಪೆಟ್ಟಿಗೆಯೊಂದನ್ನು ಸಿದ್ಧಪಡಿಸಿದ. ಅದನ್ನು ಅಪ್ಪನ ಬಳಿ ಎಳೆದು ತಂದು ಆತನ ರಟ್ಟೆ ಹಿಡಿದು ಎಬ್ಬಿಸಿದ. ಮುದುಕ ಆ ಶವಪೆಟ್ಟಿಗೆಯನ್ನು ನೋಡಿ ನಿಟ್ಟುಸಿರುಬಿಟ್ಟ. ಮಗ ತನ್ನ ಅಪ್ಪನನ್ನು ಎತ್ತಿಕೊಂಡವನೇ ಆ ಶವಪೆಟ್ಟಿಗೆಯಲ್ಲಿ ಮಲಗಿಸಿಬಿಟ್ಟ! ಮುದುಕ ಏನೂ ಮಾತನಾಡದೇ ಮತ್ತೂಮ್ಮೆ ನಿಟ್ಟುಸಿರುಬಿಟ್ಟ. ಮಗ ಆ ಶವಪೆಟ್ಟಿಗೆಯನ್ನು ಮುಚ್ಚಿ, ಅದನ್ನು ಎಳೆಯುತ್ತಾ ಎತ್ತರದ ಜಾಗವೊಂದಕ್ಕೆ ತಂದ.

ಇನ್ನೇನು ಅವನು ಆ ಶವಪೆಟ್ಟಿಗೆಯನ್ನು ಪ್ರಪಾತಕ್ಕೆ ತಳ್ಳಬೇಕು, ಅಷ್ಟರಲ್ಲೇ ಶವಪೆಟ್ಟಿಯನ್ನು ಒಳಗಿನಿಂದ ಟಪಟಪ ತಟ್ಟಿದ ಸದ್ದಾಯಿತು. ಅವನು ಮುಚ್ಚಳವನ್ನು ತೆಗೆದು ನೋಡಿದ. ಮುದುಕನ ಕಣ್ಣಲ್ಲಿ ನೀರು ಜಿನುಗುತ್ತಿತ್ತು. “”ಅಪ್ಪಿ, ನೀನು ನನ್ನನ್ನು ಕೆಳಕ್ಕೆ ತಳ್ಳಿ ಕೈತೊಳೆದುಕೊಳ್ಳಬೇಕೆಂದು ನಿರ್ಧರಿಸಿದ್ದೀಯ, ನಾನು ನಿನಗೆ ಭಾರವಾಗಿದ್ದೇನೆ ಎಂದು ನನಗೆ ಗೊತ್ತು. ಸಾಯುವುದಕ್ಕೆ ನಾನೂ ಸಿದ್ಧನಿದ್ದೇನೆ. ಆದರೆ ಅದಕ್ಕೂ ಮುನ್ನ ಒಂದು ಸಲಹೆ ನೀಡಲೇ?””ಏನು?’ ಎಂದು ಕೇಳಿದ ಮಗ.  “”ನನ್ನನ್ನು ಕೆಳಕ್ಕೆ ತಳ್ಳು, ಆದರೆ ಈ ಶವಪೆಟ್ಟಿಗೆಯನ್ನು ಹಾಳುಮಾಡಬೇಡ. ಮುಂದೆ ನಿನ್ನ ಮಕ್ಕಳಿಗಿದು ಉಪಯೋಗಕ್ಕೆ ಬರಬಹುದು!”

ಈ ಕಥೆ ಏನು ಹೇಳಲು ಹೊರಟಿದೆ ಎನ್ನುವುದು ಕೊನೆಯ ಸಾಲಿನಲ್ಲೇ ಸ್ಪಷ್ಟವಾಗಿ ತಿಳಿಯುತ್ತದೆ. ಬಹುಶಃ ಈ ಕಥೆ ಇನ್ನೂ ಸಾವಿರ ವರ್ಷವಾದರೂ ಪ್ರಸ್ತುತವಾಗಿಯೇ ಉಳಿಯುತ್ತದೇನೋ. ನಾನೇಕೆ ಹೀಗೆ ಹೇಳುತ್ತಿದ್ದೇನೆ ಎಂದರೆ, ನಾವು ಈ ರೀತಿಯ ಕಥೆಗಳಿಂದ ಪಾಠ ಕಲಿಯುವುದೇ ಇಲ್ಲ. ಜೀವನ ತುಂಬಾ ಚಿಕ್ಕದು, ಇಂದು ಯುವಕರಾಗಿ ಕುಣಿದು ಕುಪ್ಪಳಿಸುತ್ತಿರುವ ನಾವು ಕಣ್ಣುಮುಚ್ಚಿ ಕಣ್ಣುತೆರೆಯುವಷ್ಟರಲ್ಲೇ ಮುಪ್ಪಾನು ಮುದುಕರಾಗಿರುತ್ತೇವೆ. ಆಗ ಅಯ್ಯೋ ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲವಲ್ಲ, ಎಷ್ಟೊಂದು ತಪ್ಪುಮಾಡಿಬಿಟ್ಟೆನಲ್ಲ ಎಂದು ಕೊರಗಬೇಕಾಗುತ್ತದೆ. ಬಹುಶಃ ಶವಪೆಟ್ಟಿಗೆಯಲ್ಲಿ ಮಲಗಿದ್ದ ಮುದುಕನಿಗೆ ತನ್ನ ಮಗನಿಗೆ ತಾನು ಹೀಗೆ ಬೇಡವಾದೆನಲ್ಲ ಎನ್ನುವ ನೋವಿನ ಜತೆಗೆ, ತಾನೂ ಹಿಂದೆ ತನ್ನ ತಂದೆಯನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲವಲ್ಲ ಎಂಬ ಪಾಪಪ್ರಜ್ಞೆಯೂ ಆ ಸಮಯದಲ್ಲಿ
ಕಾಡಿತ್ತೇನೋ? ಒಟ್ಟಲ್ಲಿ ಈ ಒಂದು ವಿಷಚಕ್ರ ಶತಮಾನಗಳಿಂದ ಹೀಗೆಯೇ ತಿರುಗುತ್ತಲೇ ಬರುತ್ತಿದೆ. ಈ ವಿಷಚಕ್ರ ಅಂತ್ಯಗೊಳ್ಳಬೇಕು, ಪ್ರತಿಯೊಂದು ಹೃದಯದಲ್ಲೂ ಅನುಕಂಪ, ಸಹಾನುಭೂತಿಯ ಚಿಗುರು ಮೊಳಕೆಯೊಡೆದು ಹೆಮ್ಮರವಾಗಿ ಬೆಳೆದುನಿಲ್ಲಬೇಕು ಎಂದರೆ, ನಾವು ಮಾಡಬೇಕಾದದ್ದು ಇಷ್ಟೇ- ಬದುಕಿನ ನಶ್ವರತೆಯ ವಾಸ್ತವವನ್ನು ಅರ್ಥಮಾಡಿಕೊಳ್ಳುವುದು. ಯಾವಾಗ ಮನುಷ್ಯನಿಗೆ ಬದುಕು ದೀರ್ಘ‌ವಲ್ಲವೇ ಅಲ್ಲ, ಅದು ತುಂಬಾ ಚಿಕ್ಕದು ಎನ್ನುವ ನಿಷ್ಠುರ ಸತ್ಯ ಗಟ್ಟಿಯಾಗಿ ಮನದಲ್ಲಿ ಅಚ್ಚೊತ್ತುತ್ತದೋ ಆಗ ಅವನಲ್ಲಿನ ಸಣ್ಣತನಗಳೆಲ್ಲ ಕರಗಲಾರಂಭಿಸುತ್ತವೆ. ದುರಂತವೆಂದರೆ, ಈ ರೀತಿಯ ಪ್ರಜ್ಞೆ ಬಹುಪಾಲು ಜನರಿಗೆ ಜೀವನದ ಅಂತ್ಯಾವಧಿಯಲ್ಲಿ ಬೆಳೆಯುತ್ತದೆ ಎನ್ನುವುದು. ಆದರೆ ಕೊನೆಗಾಲದಲ್ಲಿ ತಪ್ಪುಗಳನ್ನು ಅರ್ಥಮಾಡಿಕೊಂಡರೇನು ಫ‌ಲ ಬಂದೀತು ಅಲ್ಲವೇ?

ಇಂದು ಸಮಾಜದಲ್ಲಿ ಅನುಕಂಪ, ಸಹಾನುಭೂತಿಯೆನ್ನುವುದು ಅಪರೂಪದ ವಸ್ತುವಾಗಿಬಿಟ್ಟಿದೆ. ಯಾರಾದರೂ ನಮ್ಮೊಂದಿಗೆ ಚೆನ್ನಾಗಿ ನಡೆದುಕೊಂಡರೆ, ಚೆನ್ನಾಗಿ ಮಾತನಾಡಿಸಿದರೆ, ಅವರು ಏನೋ
ದುರುದ್ದೇಶ ಹೊಂದಿದ್ದಾರೆ ಎಂದು ಅನುಮಾನದಿಂದ ನೋಡುತ್ತೇವೆ. ಎಲ್ಲಿಗೆ ಬಂದು ನಿಂತಿದ್ದೇವೆ ನೋಡಿ ನಾವು! ಸಾವಿರಾರು ವರ್ಷಗಳ ವಿಕಸನದ ನಂತರ ಇಂಥ ಕೆಟ್ಟ ಸ್ಥಿತಿಗೆ ಬರಬೇಕಿತ್ತೇನು?
ಸಹಾನುಭೂತಿ, ಅನುಕಂಪ, ಮಾನವೀಯತೆ ಎನ್ನುವುದೆಲ್ಲ ನಮ್ಮ ಸಹಜ ಗುಣಗಳಾಗಬೇಕು. ಹಿರಿಯರನ್ನು ಗೌರವಿಸುವುದು, ಅವರನ್ನು ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುವುದನ್ನು ಅನಿವಾರ್ಯ
ಕರ್ಮವೆಂದು ನೋಡಬಾರದು, ಅದು ನಮ್ಮ ಆದ್ಯ ಕರ್ತವ್ಯವೆಂದು ಭಾವಿಸಬೇಕು. ಆಗ ಮಾತ್ರ ಮನೆಯ ಹಿರಿಯರನ್ನು “ಲಾಭ-ನಷ್ಟದ’ ಲೆಕ್ಕಾಚಾರದಲ್ಲಿ ನೋಡುವುದನ್ನು ಬಿಡುತ್ತೇವೆ. ಇನ್ನೊಬ್ಬರಿಂದ ನಮಗೆ ಪ್ರಯೋಜನವೇನೂ ಆಗದು ಎನ್ನುವುದು ತಿಳಿದಿದ್ದರೂ ಅವರಿಗೆ
ಆಸರೆಯಾಗುವುದು ಇದೆಯಲ್ಲ, ಅದೇ ನಿಜವಾದ ಮಾನವೀಯತೆ. ಈ ರೀತಿಯ ಗುಣವು ತ್ಯಾಗವನ್ನು ಬೇಡುತ್ತದೆ. ಆದರೆ ದುರ್ಬಲ-ಸಂಕುಚಿತ ವ್ಯಕ್ತಿತ್ವದವರೆಂದಿಗೂ ತ್ಯಾಗಮಯಿಗಳಾ
ಗಲಾರರು.

Advertisement

– ಜೆನ್‌ ಕೆಲ್ಸಂಗ್‌ ರಿಗ್ಬಾ

Advertisement

Udayavani is now on Telegram. Click here to join our channel and stay updated with the latest news.

Next