ರಬಕವಿ-ಬನಹಟ್ಟಿ: ಕುಲಹಳ್ಳಿ ಗ್ರಾಮದ ಅಜ್ಜಿ ಶಾರದಾ ಮೋನೇಶ ಕಂಬಾರ ತನ್ನ ಪತಿಯನ್ನು ಕಳೆದುಕೊಂಡು 2 ವರ್ಷಗಳಾಗಿವೆ. ಸದಾ ಆತನನ್ನು ಜಪಿಸುತ್ತಲೇ ಬದುಕುತ್ತಿರುವ ಶಾರದಾ ಹಾವಿನ ರೂಪದಲ್ಲಿ ನನ್ನ ಮನೆಗೆ ಬಂದಿದ್ದಾನೆ ಎಂದು ಕಳೆದ ನಾಲ್ಕು ದಿನಗಳಿಂದ ಅದರ ಜೊತೆಗೆ ವಾಸವಾಗಿರುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸುವಂತಹ ಘಟನೆ ನಡೆದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಹಾವೊಂದು ಶಾರದಾ ಕಂಬಾರ ಅವರ ಮನೆಯಲ್ಲಿ ಬಂದಿದೆ. ಮಲಗಿದ ಚಾಪೆ ಮೇಲೆ ಕಂಡ ಹಾವನ್ನು ಯಾವುದೇ ಆತಂಕಗೊಳ್ಳದೆ ತನ್ನ ಪತಿ ಹಾವಿನ ರೂಪದಲ್ಲಿ ಬಂದಿರುವುದಾಗಿ ನಂಬಿ, ಅದರ ಜೊತೆಗೆ ನಾಲ್ಕು ದಿನ ಕಳೆದಿದ್ದಾಳೆ.
ಅಕ್ಕಪಕ್ಕದ ಜನ ಹಾವನ್ನು ಹೊರಗೆ ಬಿಟ್ಟು ಬರೋಣಾವೆಂದಾಗ, ಮೃತಪಟ್ಟಿರುವ ನನ್ನ ಪತಿ ಈ ಹಾವಿನ ರೂಪದಲ್ಲಿ ಬಂದು ನನ್ನ ಹತ್ತಿರ ಇದ್ದಾರೆ. ಅದಕ್ಕೆ ಯಾರೂ ತೊಂದರೆ ಮಾಡಬಾರದು, ಹಿಡಿಯಬಾರದು ಎಂದು ಅದನ್ನು 4 ದಿನಗಳಿಂದ ಅಜ್ಜಿ ಶಾರದಾ, ತಾನು ಮಲಗುವ ಚಾಪೆ ಮೇಲೆ ಇರಿಸಿ, ಅದನ್ನು ಜೋಪಾನ ಮಾಡುತ್ತಿದ್ದರು. ಹೀಗಾಗಿ ಅಜ್ಜಿಯ ನಂಬಿಕೆ ಹಾಗು ಹಾವನ್ನು ನೋಡಲು ಸುತ್ತಮುತ್ತಲಿನ ಜನ ಮುಗಿ ಬಿದ್ದಿದ್ದರು.
ಇದನ್ನೂ ಓದಿ: 2006ರ ವಾರಾಣಸಿ ಸರಣಿ ಸ್ಫೋಟ : ಉಗ್ರ ವಲಿಯುಲ್ಲಾಗೆ ಮರಣ ದಂಡನೆ
ನಾಲ್ಕು ದಿನಗಳಿಂದ ಹಾವಿಗೆ ಊಟ, ಹಾಲು ಏನು ಇಲ್ಲದ ಕಾರಣ ಅಸ್ವಸ್ಥಗೊಂಡು ಸುಸ್ತಾಗಿ ಬಿದ್ದಿದೆ ಎಂದು ಹೇಳಲಾಗಿತ್ತಾದರೂ, ಸುತ್ತಲಿನ ಜನ ಅದಕ್ಕೆ ಹಾಲು ನೀಡಿದರೂ ಕುಡಿಯದೆ ಬಾಯಿ ಹತ್ತಿರ ಸ್ವಲ್ಪ ಗಾಯವಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೋಮವಾರ ಅಜ್ಜಿಯ ಮನವೊಲಿಸಿ ಸಮೀಪದ ಕೃಷ್ಣಾ ನದಿ ತಟದ ಅರಣ್ಯ ಭಾಗದಲ್ಲಿ ಹಾವನ್ನು ಸ್ಥಳೀಯರು ಬಿಟ್ಟು ಬಂದ ಪ್ರಕರಣ ನಡೆದಿದೆ.
ನನ್ನ ಪತಿಯು ಹಾವಿನ ರೂಪದಲ್ಲಿ ಬಂದಿದ್ದಾನೆ. ಅದಕ್ಕಾಗಿಯೇ ಜೋಪಾನವಾಗಿ ನನ್ನ ಹತ್ತಿರ ಇತ್ತು. ಓಣಿಯವರು ಇಂದು ಹೊರಗೆ ಬಿಟ್ಟು ಬಂದಿದ್ದಾರೆ.
-ಶಾರದಾ ಮೋನೇಶ ಕಂಬಾರ
ಶಾರದಾ ಎಂಬ ಅಜ್ಜಿಯು ತನ್ನ ಗಂಡ ರೂಪದಲ್ಲಿ ಹಾವು ಮನೆಗೆ ಬಂದಿದೆ ಎಂದು ತಿಳಿದುಕೊಂಡಿದ್ದಾಳೆ. ಸುತ್ತಲಿನ ಕುಟುಂಬಗಳಿಗೆ ತೊಂದರೆಯಾಗಿ ಭಯದಲ್ಲಿದ್ದರು. ಈ ಕಾರಣದಿಂದ ಹೊಳೆಯ ನಿಸರ್ಗದತ್ತ ಬಿಟ್ಟು ಬಂದೇವು.
-ಹೊಳೆಬಸು ತಳವಾರ, ಹಿರಿಯರು, ಕುಲಹಳ್ಳಿ.