ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪಾಲಿಕೆ ಸದಸ್ಯ, ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಏಳು ಜನರಿಗೆ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ವಿವಾದಾತ್ಮಕ ಪೋಸ್ಟ್ ಹಂಚಿಕೆ ವಿಷಯವಾಗಿ ಏ. 14ರಂದು ರಾತ್ರಿ ಹಳೇಹುಬ್ಬಳ್ಳಿ ಬಳಿ ಉದ್ರಿಕ್ತರ ಗುಂಪು ಪೊಲೀಸರು ಹಾಗೂ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿ ಹಳೇಹುಬ್ಬಳ್ಳಿ ಪೊಲೀಸರು ಒಟ್ಟು 154 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.
ಬಂಧಿತರಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಿಕೆ ಸದಸ್ಯ ಇನ್ನಿತರರಿದ್ದರು. ಇವರಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಜಾಮೀನು ಕೋರಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ವಿದ್ಯಾರ್ಥಿಗಳೆಂಬ ಕಾರಣಕ್ಕೆ 4 ಜನರಿಗೆ ಹಾಗೂ ಸಮಾಜ ಸೇವಕ ಎಂಬ ಕಾರಣಕ್ಕೆ ಓರ್ವ ಪಾಲಿಕೆ ಸದಸ್ಯನಿಗೆ ಹಾಗೂ ಆರೋಗ್ಯ ಸಮಸ್ಯೆ ನಿಮಿತ್ತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ಜಾಮೀನು ಮಂಜೂರು ನೀಡಿದೆ.
ಇದನ್ನೂ ಓದಿ : ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ ; ರೆಡ್ ಅಲರ್ಟ್