Advertisement

ಹಬ್ಬ ಮುಗಿಯುತ್ತಿದ್ದಂತೆ ಕಾಲು ಸಂಕ ಕಾಮಗಾರಿ

12:32 AM Oct 24, 2022 | Team Udayavani |

ಉಡುಪಿ: ಜಿಲ್ಲೆಗೆ ಅಗತ್ಯವಿರುವ ಹೊಸ ಕಾಲುಸಂಕಗಳ ನಿರ್ಮಾಣ ಹಾಗೂ ಹಳೇ ಕಾಲುಸಂಕಗಳ ದುರಸ್ತಿ ಕಾಮಗಾರಿಯನ್ನು ದೀಪಾವಳಿ ಹಬ್ಬ ಮುಗಿದ ತತ್‌ಕ್ಷಣದಿಂದಲೇ ಆರಂಭಿಸುವಂತೆ ಜಿಲ್ಲಾ ಪಂಚಾಯತ್‌ನಿಂದ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ನಿರ್ದೇಶನ ನೀಡಲಾಗಿದೆ.

Advertisement

ಸರಿಯಾದ ಕಾಲುಸಂಕ ವ್ಯವಸ್ಥೆಯಿಲ್ಲದೆ ಬೈಂದೂರು ತಾಲೂಕಿನಲ್ಲಿ ಮಗುವೊಂದು ಹಳ್ಳಕ್ಕೆ ಬಿದ್ದು ಮೃತಪಟ್ಟಿತ್ತು. ಈ ಘಟನೆಯ ಅನಂತರದಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕಾಲುಸಂಕಗಳ ಮಾಹಿತಿಯನ್ನು ಸಂಗ್ರಹಿಸಿತ್ತು. ಎಲ್ಲೆಲ್ಲಿ ಕಾಲುಸಂಕಗಳ ನಿರ್ಮಾಣ ಆಗಬೇಕು ಮತ್ತು ದುರಸ್ತಿ ನಡೆಸಬೇಕು ಎಂಬುದರ ಸಂಪೂರ್ಣ ವಿವರವನ್ನು ಪಿಡಿಒಗಳ ಮೂಲಕ ಪಡೆಯಲಾಗಿದೆ. ಅದರಂತೆ ನರೇಗಾ ಯೋಜನೆಯಡಿ ಕಾಮಗಾರಿ ನಡೆಸಲು ನಿರ್ದೇಶನವನ್ನು ನೀಡಲಾಗಿತ್ತು. ಮಳೆಯಿಂದ ನದಿ, ಹಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಜಿಲ್ಲೆಯಲ್ಲಿ ಈಗ ಬಹುತೇಕ ಮಳೆ ಕಡಿಮೆಯಾಗಿರುವುದರಿಂದ ದೀಪಾವಳಿ ಹಬ್ಬ ಮುಗಿದ ತತ್‌ಕ್ಷಣದಿಂದಲೇ ಕಾಮಗಾರಿ ಶುರು ಮಾಡುವಂತೆ ಪಿಡಿಒಗಳಿಗೆ ಜಿ.ಪಂ. ಸೂಚನೆ ನೀಡಿದೆ.

ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣ
ಜಿಲ್ಲೆಗೆ ಅಗತ್ಯವಿರುವ 567 ಕಾಲುಸಂಕಗಳನ್ನು ಆಯಾ ಗ್ರಾ.ಪಂ.ಗಳ ಮೂಲಕವೇ ಮಾಡಲಾಗುತ್ತದೆ. ದೀಪಾವಳಿ ಮುಗಿದ ತತ್‌ಕ್ಷಣವೇ ಕಾಮಗಾರಿ ಆರಂಭವಾಗಲಿದೆ. ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಜನವರಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಕಾಲುಸಂಕಗಳು ಮುಕ್ತವಾಗಿರಬೇಕು. ಮುಂದಿನ ಮಳೆಗಾಲ ಆರಂಭವಾಗುವ ಮೊದಲು ಯಾವುದೇ ಹಳ್ಳಿಯಲ್ಲೂ ಕಾಲುಸಂಕ ಇಲ್ಲ, ದುರಸ್ತಿ ಆಗಿಲ್ಲ ಎಂಬ ಸಬೂಬು ನೀಡಬಾರದು ಎಂದು ಪಿಡಿಒಗಳಿಗೆ ಜಿ.ಪಂ. ಅಧಿಕಾರಿಗಳು ಸ್ಪಷ್ಟ ನಿರ್ದೇಶನವನ್ನು ನೀಡಿದ್ದಾರೆ.

ನರೇಗಾದಡಿ ಕಾಮಗಾರಿ
ಕಾಲುಸಂಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿ.ಪಂ.ನಿಂದ ಎಲ್ಲ ಪಿಡಿಒಗಳ ಸಭೆಯನ್ನು ನಡೆಸಲಾಗಿದೆ. ನರೇಗಾದಡಿ ಸುಮಾರು 4 ಲಕ್ಷದವರೆಗೂ ಕಾಮಗಾರಿ ನಡೆಸಲು ಅವಕಾಶವಿದೆ. ಹೀಗಾಗಿ ಮೂರು ಅಡಿ ಅಗಲದ ಕಾಲುಸಂಕಗಳನ್ನು ಸುಲಭವಾಗಿ ನಿರ್ಮಾಣ ಮಾಡಬಹುದು. ಅಲ್ಲದೆ, ಕಾಲುಸಂಕಗಳ ಉದ್ದ ತೀರ ಕಡಿಮೆ ಇರುವುದರಿಂದ ನಿರ್ದಿಷ್ಟ ಅನುದಾನದಲ್ಲಿ ಕಾಮಗಾರಿ ನಡೆಸಲು ಸಾಧ್ಯವಿದೆ. ನರೇಗಾದಡಿ ಮಾನವ ದಿನಗಳ ಹೆಚ್ಚೆಚ್ಚು ಸೃಜನೆಗೂ ಇದು ಅನುಕೂಲ ಆಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

567 ಕಾಲುಸಂಕ ಅಗತ್ಯ
ಜಿಲ್ಲೆಯ ಒಟ್ಟು 155 ಗ್ರಾ.ಪಂ.ಗಳಲ್ಲಿ 103 ಗ್ರಾ.ಪಂ.ಗಳಿಗೆ ಕಾಲುಸಂಕದ ಅಗತ್ಯವಿದೆ. 52 ಗ್ರಾ.ಪಂ.ಗಳಲ್ಲಿ ಕಾಲುಸಂಕದ ಅಗತ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. 103 ಗ್ರಾ.ಪಂ.ಗಳಲ್ಲಿ 567 ಕಾಲುಸಂಕಗಳನ್ನು ನಿರ್ಮಾಣದ ಅಗತ್ಯವಿದೆ. 8,220 ಕುಟುಂಬಗಳು ಕಾಲುಸಂಕ ಬಳಸುತ್ತಿದ್ದು, ಇದರಲ್ಲಿ 5,108 ಶಾಲಾ ಕಾಲೇಜು ಮಕ್ಕಳು ಇದ್ದಾರೆ.

Advertisement

ಕಾಲುಸಂಕಗಳ ನಿರ್ಮಾಣ ದೀಪಾವಳಿ ಮುಗಿದ ತತ್‌ಕ್ಷಣದಿಂದ ಆರಂಭವಾಗಲಿದೆ. ಡಿಸೆಂಬರ್‌ ಅಂತ್ಯಕ್ಕೆ ಎಲ್ಲ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನರೇಗಾದಡಿಯಲ್ಲಿ ಕಾಮಗಾರಿ ನಡೆಯಲಿದೆ. ಈ ಬಗ್ಗೆ ಪಿಡಿಒಗಳಿಗೂ ಸೂಚನೆ ನೀಡಲಾಗಿದೆ.
-ಪ್ರಸನ್ನ ಎಚ್‌., ಸಿಇಒ,
ಉಡುಪಿ ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next