Advertisement

ಕೂಳೂರಿನ ಗುರುಪುರ ಹಳೆ ಸೇತುವೆ ತಡೆಗೋಡೆ ಶಿಥಿಲ; ಅಪಾಯ ಆಹ್ವಾನ

10:37 AM Apr 22, 2018 | Team Udayavani |

ಕೂಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಗುರುಪುರ ಹಳೆ ಸೇತುವೆಯ ತಡೆಗೋಡೆಯ ಒಂದು ಭಾಗ ಕುಸಿದು ಬಿದ್ದಿದ್ದು ಹಲವೆಡೆ ಬಿರುಕು ಬಿಟ್ಟು ಅಪಾಯವನ್ನು ಆಹ್ವಾನಿಸುತ್ತಿದೆ.

Advertisement

ಇಲ್ಲಿನ ತಡೆಗೋಡೆಗೆ ವಾಹನಗಳು ಬಡಿದು ಬಹುತೇಕ ಧರಾಶಾಯಿಯಾಗಿದೆ. ಆದರೆ ದುರಸ್ತಿ ಕಾರ್ಯ ಶಾಶ್ವತವಾಗಿ ನಡೆದಿಲ್ಲ. ತಡೆಗೋಡೆಯ ಕಾಂಕ್ರೀಟ್‌ ಕಂಬಗಳು ನದಿಯ ಪಾಲಾಗಿದ್ದರೆ ಅಪಾಯವಾಗದಂತೆ ಪೊಲೀಸರು ತಡೆಯಾಗಿ ಇಟ್ಟಿದ್ದ ಬ್ಯಾರಿಕೇಡ್‌ಗಳು ನದಿಗೆ ಬಿದ್ದಿವೆ. ಕಳೆದ ವರ್ಷ ಬಸ್ಸೊಂದು ಢಿಕ್ಕಿಯಾದ ಸ್ಥಳದಲ್ಲಿಯೂ ತಡೆಗೋಡೆಯ ಕಬ್ಬಿಣದ ಸರಳುಗಳು ಮಾತ್ರ ಉಳಿದುಕೊಂಡಿವೆ. ರಾತ್ರಿ ಸೇತುವೆಯ ಮೇಲೆ ಬೀದಿ ದೀಪವೂ ಇಲ್ಲದ ಕಾರಣ ಯಾವುದೇ ಕ್ಷಣದಲ್ಲಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಸೇತುವೆ ಮೊದಲೇ ಅಗಲ ಕಿರಿದಾಗಿರುವುದರಿಂದ ಪಾದಚಾರಿಗಳು ಅಪಾಯದಲ್ಲೇ ಸೇತುವೆ ದಾಟ ಬೇಕಾಗುತ್ತದೆ.

ಕಡಿದಾದ ಅಪಾಯಕಾರಿ ತಿರುವು
ಉಡುಪಿಯಿಂದ ಮಂಗಳೂರು ಕಡೆ ಸಾಗುವ ಮೇಲ್ಸೇತುವೆ ಕಡಿದಾದ ತಿರುವು ಹೊಂದಿರುವುದರಿಂದ ನಿಯಂತ್ರಣ ತಪ್ಪಿದರೆ ವಾಹನಗಳು ನೇರ ನದಿಗೆ ಉರುಳಿ ಬೀಳುವ ಸಾಧ್ಯತೆ ಹೆಚ್ಚು. ಇಂತಹ ಘಟನೆಗಳು ಹಿಂದೆ ಹಲವು ಬಾರಿ ಸಂಭವಿಸಿವೆ. ಮಳೆಗಾಲದಲ್ಲಿ ತಿರುವುವರೆಗೆ ನೀರು ಹೆಚ್ಚುತ್ತದೆ. ಈ ಸಂದರ್ಭ ಅಪಾಯದ ಪ್ರಕರಣಗಳು ಆಗದಂತೆ ರಕ್ಷಣಾತ್ಮಕವಾಗಿ ಶಾಶ್ವತ ತಡೆಗೋಡೆಯ ಅಗತ್ಯವಿದೆ.

ವೇಗಮಿತಿ ಫಲಕ, ಬೀದಿ ದೀಪ ಅಳವಡಿಸಿ
ಹಳೆಯ ಸೇತುವೆ ಇದಾಗಿರುವುದರಿಂದ ವೇಗ ಮಿತಿ ಫಲಕಗಳು ಅಗತ್ಯವಿದೆ. ಸೇತುವೆಯ ಮೇಲೆ ಎಲ್‌ಇಡಿ ಬೀದಿ ದೀಪ ಆವಶ್ಯಕತೆಯಿದ್ದು ಇದರಿಂದ ಪಾದಚಾರಿಗಳಿಗೆ ನಡೆದಾಡಲು ಅನುಕೂಲವಾಗಲಿದೆ.

ಮಳೆಗಾಲದೊಳಗೆ ತಾತ್ಕಾಲಿಕ ದುರಸ್ತಿ
ರಾಷ್ಟ್ರೀಯ ಹೆದ್ದಾರಿ ಕೂಳೂರಿನ ಹಳೆ ಸೇತುವೆ ತಡೆಗೋಡೆ ಶಿಥಿಲಗೊಂಡಿದೆ. ಮುಂದಿನ ಮಳೆಗಾಲದ ಒಳಗೆ ತಾತ್ಕಾಲಿಕವಾಗಿಯಾದರೂ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
 - ವಿಜಯ್‌ ಸ್ಯಾಮ್ಸನ್‌, ಪ್ರಾಜೆಕ್ಟ್ ಡೈರೆಕ್ಟರ್‌,
     ರಾ.ಹೆ. ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next