ಬೆಂಗಳೂರು: ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಯುವತಿಗೆ ಓಲಾ ಕ್ಯಾಬ್ ಚಾಲಕನೊಬ್ಬ ಮೊಬೈಲ್‌ನಲ್ಲಿ “ಸೆಕ್ಸ್ ವಿಡಿಯೋ’ ತೋರಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ವಿಧಾನಸೌಧ ಸಮೀಪದ ಟ್ರಾಫಿಕ್ ಸಿಗ್ನಲ್ ಬಳಿ ಓಲಾ ಚಾಲಕ ಯುವತಿ ಜತೆ ಅಸಭ್ಯವರ್ತನೆ ತೋರಿದ್ದು, 22 ವರ್ಷದ ಸಂತ್ರಸ್ತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಓಲಾ ಚಾಲಕ ದೇವಸ ಮೌಲಿಯಾ ಎಂಬಾತನ ವಿರುದ್ಧ ಲೈಂಗಿಕ ದೌರ್ಜನ್ಯ ಯತ್ನ, ದೈಹಿಕ ಸಂಪರ್ಕಕ್ಕೆ ಬೇಡಿಕೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಯಲಹಂಕದ ನಿವಾಸಿಯಾಗಿರುವ ಸಂತ್ರಸ್ತೆ, ಆ.23ರಂದು ಜೆ.ಪಿ.ನಗರದಲ್ಲಿರುವ ತಾನು ಕೆಲಸ ಮಾಡುವ ಎನ್‌ಜಿಒಗೆ ತೆರಳಲು ಬೆಳಗ್ಗೆ 6.28ಕ್ಕೆ ಓಲಾ ಆ್ಯಪ್ ಮೂಲಕ ಕೆ.ಎ. 53. ಸಿ 9192 ನಂಬರ್‌ನ ಕ್ಯಾಬ್ ಬುಕ್ ಮಾಡಿದ್ದಾರೆ. ಕೆಲ ಸಮಯದ ಬಳಿಕ ಕ್ಯಾಬ್ ಬಂದಿದ್ದು ಯುವತಿ ಹತ್ತಿಕೊಂಡಿದ್ದಾರೆ. ವಿಧಾನಸೌಧ ತಲುಪುವವರೆಗೂ ಸುಮ್ಮನಿದ್ದ ಚಾಲಕ, ಸಿಗ್ನಲ್‌ನಿಂದ ಮುಂದೆ ಕ್ವೀನ್ಸ್ ರಸ್ತೆಗೆ ಬಂದಾಗ ಯುವತಿಗೆ ತಾನು ಕಾಣುವಂತೆ ಕ್ಯಾಬ್‌ನ ಮಿರರ್ ತಿರುಗಿಸಿ, ಪದೇ ಪದೆ ಮಿರರ್ ಮೂಲಕ ಅಶ್ಲೀವಾಗಿ ನೋಡುತ್ತಿದ್ದ.
ವಿಡಿಯೋ ಪ್ಲೇ ಮಾಡಿದ: ಮಿರರ್ ಮೂಲಕಿ ಕಿರಿಕಿರಿ ಕೊಟ್ಟ ಸುಮ್ಮನಾಗದ ಓಲಾ ಚಾಲಕ, ಯುವತಿಗೆ ಕಾಣುವಂತೆ ಎಡಗೈನಲ್ಲಿ ಮೊಬೈಲ್ ಹಿಡಿದುಕೊಂಡು ಸೆಕ್ಸ್ ವಿಡಿಯೋ ಪ್ಲೇ ಮಾಡಿದ್ದಾನೆ. ಬಳಿಕ ತನ್ನ ಕೈ ನಿಂದ ಪ್ಯಾಂಟ್ ಉಜ್ಜಿಕೊಂಡು ಅಸಹ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಗೊಂಡು ಕ್ಯಾಬ್ ನಿಲ್ಲಿಸುವಂತೆ ಸೂಚಿಸಿದರೂ ಆತ “ನಿಮ್ಮ ಲೊಕೇಶನ್’ ಬಂದಿಲ್ಲ ಎಂದು ಹೇಳಿ ಜೆ.ಪಿ.ನಗರದವರೆಗೆ ಕರೆದೊಯ್ದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಆರೋಪಿ ಕೆಲಸದಿಂದ ವಜಾ!: ಜೆ.ಪಿ.ನಗರದಲ್ಲಿ ತಾನು ಕೆಲಸ ಮಾಡುವ ಲೊಕೇಶನ್ ಬಂದ ಬಳಿಕ ಕ್ಯಾಬ್‌ನಿಂದ ಇಳಿದ ಸಂತ್ರಸ್ತೆ, ಓಲಾ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಚಾಲಕನ ಅಸಭ್ಯ ವರ್ತನೆ ಕುರಿತು ದೂರು ನೀಡಿದ್ದಾರೆ. ಈ ದೂರು ಆಧರಿಸಿ ಕಂಪನಿಯು ಚಾಲಕ ದೇವಸ ಮೌಲಿಯಾನನ್ನು ಕೆಲಸದಿಂದ ವಜಾಗೊಳಿಸಿದೆ. ಇದಾದ ಬಳಿಕ ಆರೋಪಿ ದೇವಸಮೌಲಿಯಾ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕಾಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇ-ಮೇಲ್ ಮೂಲಕ ದೂರು ನೀಡಿದ್ದ ಮಹಿಳೆ: ಜೂನ್ 1ರಂದು ಮಹಿಳಾ ಪ್ರಯಾಣಿಕರೊಬ್ಬರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಕ್ಯಾಬ್ ಚಾಲಕ ಏರ್‌ಪೋರ್ಟ್ ಬದಲು ಬೇರೊಂದು ಜಾಗಕ್ಕೆ ಮಹಿಳೆಯ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ. ಘಟನೆ ಬಳಿಕ ಸಂತ್ರಸ್ತೆ ಇ-ಮೇಲ್ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.