Advertisement

ತಪ್ಪಾಗಿದೆ, ಒಮ್ಮೆ ಕ್ಷಮಿಸಿಬಿಡು ಮಾರಾಯ್ತಿ…

12:30 AM Jan 15, 2019 | |

ಪ್ರತಿನಿತ್ಯ ನಿನ್ನ “ಗುಡ್‌ ಮಾರ್ನಿಂಗ್‌’ ಸಂದೇಶದಿಂದಲೇ ನನಗೆ ಬೆಳಕಾಗುತ್ತಿತ್ತು. ಕಾಲೇಜಿನಲ್ಲಿ ದಿನಕ್ಕೊಮ್ಮೆಯಾದರೂ ಮಾತನಾಡದಿದ್ದರೆ ಆ ದಿನದ ನಿದ್ದೆಗೆ ಖೋತಾ. ನನಗೆ ಕನ್ನಡ ಬಿಟ್ಟು ಬೇರೆ ಸಿನಿಮಾಗಳು ಅರ್ಥವಾಗದಿದ್ದರೂ ನಿನಗೋಸ್ಕರ ಥಿಯೇಟರ್‌ಗೆ ಬರುತ್ತಿದ್ದೆ. ಆಗ ನೀನು ಪುಟ್ಟಮಗುವಿನಂತೆ, ಸಿನಿಮಾದ ಕಥೆಯನ್ನು ನನಗೆ ವಿವರಿಸುತ್ತಿದ್ದೆಯಲ್ಲ, ಅದನ್ನ ಮರೆಯೋಕಾಗುತ್ತಾ? 

Advertisement

ಇಂದಿಗೆ ಭರ್ತಿ ಹನ್ನೆರಡು ತಿಂಗಳುಗಳಾದವು ನಾವಿಬ್ಬರೂ ಮಾತು ಬಿಟ್ಟು. ಒಂದು ಸಣ್ಣ ಕಾರಣ ನಮ್ಮಿಬ್ಬರ ಬದುಕಿನಲ್ಲಿ ಬಿರುಗಾಳಿಯಂತೆ ಬಂದು ಪ್ರೀತಿಯನ್ನು ದಿಕ್ಕಾಪಾಲು ಮಾಡುತ್ತದೆ ಎಂದು ನಾನಂತೂ ಊಹಿಸಿರಲಿಲ್ಲ. ನೀ ಬಿಟ್ಟು ಹೋದಂದಿನಿಂದ ನಿನದೇ ನೆನಪು, ನಿನದೇ ಕನವರಿಕೆ ಎಂದು ಸುಳ್ಳು ಹೇಳಿ ನಿನಗೆ ಹತ್ತಿರವಾಗಲು ಮನಸ್ಸಿಲ್ಲ. ಪ್ರೀತಿ- ಪ್ರೇಮದ ಹೊರತಾಗಿಯೂ ಒಂದು ಸುಂದರ ಜೀವನವಿದೆ ಎಂಬುದು ನನಗೆ ಅರ್ಥವಾಗಲು ಕಾರಣವಾದವಳು ನೀನು, ಅದಕ್ಕಾಗಿ ತುಂಬಾ ಧನ್ಯವಾದಗಳು. 

ಮೊನ್ನೆ ಯಾವುದೋ ಕೆಲಸಕ್ಕಾಗಿ ಕಲಬುರ್ಗಿಗೆ ಹೊರಟಿದ್ದೆ. ನೀನೂ ಅದೇ ಬಸ್‌ನಲ್ಲಿದ್ದೆ. ನನ್ನನ್ನು ನೋಡಿಯೂ ಮುಖದಲ್ಲಿ ಯಾವುದೇ ಬದಲಾವಣೆಯನ್ನು ತೋರಿಸಲಿಲ್ಲ. ಇದು ನನಗೇನೂ ಅಚ್ಚರಿಯ ವಿಷಯವಲ್ಲ. ಯಾಕಂದ್ರೆ, ಬಿಟ್ಟು ಹೋಗುವ ದಿನ ಹೇಳಿಬಿಟ್ಟಿದ್ದೆಯಲ್ಲ, “ಇವತ್ತಿನಿಂದ ನಮ್ಮಿಬ್ಬರ ಸಂಬಂಧಕ್ಕೆ ಫ‌ುಲ್‌ಸ್ಟಾಪ್‌ ಬಿದ್ದಿದೆ. ಇನ್ಮುಂದೆ ಇಬ್ಬರೂ ಅಪರಿಚಿತರು’ ಎಂದು!

ಅಂದು ಬಸ್‌ನಲ್ಲಿ ಹೃದಯ ನಿನ್ನನ್ನೇ ನೋಡಲು ತವಕಿಸುತ್ತಿತ್ತು. ಆದರೆ ಮನಸ್ಸು ಬೇಡವೆನ್ನುತ್ತಿತ್ತು. ಹೊರಗೆ ನೋಡುವ ನೆಪದಲ್ಲಿ ಕಿಟಕಿಯನ್ನು ಅತ್ತ ಸರಿಸಿದೆ. ಆ ಕ್ಷಣ ಬೇಡವೆಂದರೂ ಕಣ್ಣಂಚಲ್ಲಿ ನೀರು ಒತ್ತರಿಸಿಕೊಂಡು ಬಂತು. ಅದೆಷ್ಟೋ ವರ್ಷಗಳಿಂದ ಭೂಮಿಯೊಳಗಿದ್ದ ಜಾÌಲಾಮುಖೀಯಂತೆ ನಿನ್ನ ನೆನಪುಗಳು ಸ್ಫೋಟವಾದವು. 

ಎಷ್ಟು ಚೆಂದ ಇದ್ದವಲ್ವಾ, ಆ ದಿನಗಳು. ಪ್ರತಿನಿತ್ಯ ನಿನ್ನ “ಗುಡ್‌ ಮಾರ್ನಿಂಗ್‌’ ಸಂದೇಶದಿಂದಲೇ ನನಗೆ ಬೆಳಕಾಗುತ್ತಿತ್ತು. ಕಾಲೇಜಿನಲ್ಲಿ ದಿನಕ್ಕೊಮ್ಮೆಯಾದರೂ ಮಾತನಾಡದಿದ್ದರೆ ಆ ದಿನದ ನಿದ್ದೆಗೆ ಖೋತಾ. ನನಗೆ ಕನ್ನಡ ಬಿಟ್ಟು ಬೇರೆ ಸಿನಿಮಾಗಳು ಅರ್ಥವಾಗದಿದ್ದರೂ ನಿನಗೋಸ್ಕರ ಥಿಯೇಟರ್‌ಗೆ ಬರುತ್ತಿದ್ದೆ. ಆಗ ನೀನು ಪುಟ್ಟಮಗುವಿನಂತೆ, ಸಿನಿಮಾದ ಕಥೆಯನ್ನು ನನಗೆ ವಿವರಿಸುತ್ತಿದ್ದೆಯಲ್ಲ, ಅದನ್ನ ಮರೆಯೋಕಾಗುತ್ತಾ? ಮೊದಲು ನಿನ್ನ ಹಿಂದೆ ಅಲೆದು ಅಲೆದೂ ಸುಸ್ತಾಗಿ ಹೋಗುವಷ್ಟು ಸತಾಯಿಸಿಬಿಟ್ಟೆಯಲ್ಲಾ ನನ್ನ! ನಿನ್ನಲ್ಲಿ ಪ್ರೀತಿ ನಿವೇದನೆ ಮಾಡಿಕೊಂಡ ಪರಿಯಂತೂ ರೋಮಾಂಚಕ. “ಇನ್ನೂ ಐದು ವರ್ಷ ಬಿಟ್ಟು ನನ್ನ ಮಗೂನ ಎಲ್‌ಕೆಜಿಗೆ ಸೇರಿಸುವಾಗ ತಾಯಿಯ ಕಾಲಮ್ಮಿನಲ್ಲಿ ನಿಮ್ಮ ಹೆಸರು ಬರೀತೀನಿ. ಅದಕ್ಕೆ ಒಪ್ತಿàರಾ?’ ಅಂತ ಸಿನಿಮಾ ಶೈಲಿಯಲ್ಲಿ ಪ್ರಪೋಸ್‌ ಮಾಡಿದ್ದೆ. ಅದನ್ನು ಕೇಳಿ ನೀನು “ಯೆಸ್‌’ ಅಂತ ನಾಚಿಕೆಯಿಂದ ತಲೆತಗ್ಗಿಸಿದಾ ಮನಸ್ಸಿನಲ್ಲಿ ಸಂಭ್ರಮದ ದಿಬ್ಬಣ ಹೊರಟಿತ್ತು. 

Advertisement

ಹೀಗೆ ಹೇಳುತ್ತಾ ಹೋದರೆ, ಸಾಗರದ ಹನಿಗಳಷ್ಟು ನೆನಪುಗಳು, ಬರೆದಷ್ಟೂ ಕೊನೆ ಇಲ್ಲದ ಸಾಲುಗಳು ಜೊತೆಗಿವೆ. ಮತ್ತೆ ನಾವ್ಯಾಕೆ ಹೀಗೆ ಅಪರಿಚಿತರಂತಾದೆವು? ಅದೇನೆ ಇರಲಿ, ನನ್ನಿಂದಲೇ ತಪ್ಪಾಗಿದೆ. ಒಮ್ಮೆ ಕ್ಷಮಿಸಿಬಿಡು ಮಾರಾಯ್ತಿ. ಈ ಮೌನವನ್ನು ಇನ್ನು ಸಹಿಸೋಕೆ ಸಾಧ್ಯವಿಲ್ಲ. “ಹಾಯ್‌’ ಅಂತ ಒಂದು ಮೆಸೇಜ್‌ ಮಾಡು ಸಾಕು. ಪುನಃ ಅದೇ ಕಲ್ಲುಬೆಂಚಿನ ಮೇಲೆ ಕುಳಿತು ಮನ ಬಿಚ್ಚಿ ಮಾತಾಡೋಣ, ಹಳೆ ಕನಸುಗಳಿಗೆ ನೀರುಣಿಸೋಣ. ಮತ್ತೆ ನಿನ್ನಿಂದ ದೂರಾಗುವ ಮಾತೇ ಇಲ್ಲ.

ಇಂತಿ ನಿನ್ನ ಸಂದೇಶಕ್ಕಾಗಿ ಕಾಯುತ್ತಿರುವ  
– ನಾಗರಾಜ್‌ ಬಿ. ಚಿಂಚರಕಿ

Advertisement

Udayavani is now on Telegram. Click here to join our channel and stay updated with the latest news.

Next