Advertisement

ತೈಲ ಪೂರೈಕೆ: ಇರಾನ್‌ ನಂ.2

06:00 AM Jul 24, 2018 | |

ಹೊಸದಿಲ್ಲಿ: ಇರಾನ್‌ನಿಂದ ಕಚ್ಚಾ ತೈಲ ಆಮದನ್ನು ನವೆಂಬರ್‌ ಒಳಗಾಗಿ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಅಮೆರಿಕ ಭಾರತಕ್ಕೆ ಸೂಚಿಸಿರುವ ಬೆನ್ನಲ್ಲೇ ದೇಶಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ರಾಷ್ಟ್ರಗಳ ಪೈಕಿ ಇರಾನ್‌ 2ನೇ ಸ್ಥಾನ ಪಡೆದುಕೊಂಡಿದೆ. ಏಪ್ರಿಲ್‌-ಜೂನ್‌ ವರೆಗಿನ ತ್ತೈಮಾಸಿಕಕ್ಕೆ ಸಂಬಂಧಿಸಿದ ಬೆಳವಣಿಗೆ ಇದಾಗಿದೆ. ಇದುವರೆಗೆ ಆ ಸ್ಥಾನವನ್ನು ಸೌದಿ ಅರೇಬಿಯಾ ಪಡೆದುಕೊಂಡಿತ್ತು. ಭಾರತ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ಅವಧಿಯಲ್ಲಿ ಇರಾನ್‌ನಿಂದ ಪ್ರತಿ ದಿನ 4.57 ಲಕ್ಷ ಬ್ಯಾರೆಲ್‌ಗ‌ಳಷ್ಟು ಕಚ್ಚಾ ತೈಲ ಆಮದು ಮಾಡಿಕೊಂಡಿವೆ.

Advertisement

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಲೋಕಸಭೆಗೆ ಸೋಮವಾರ ಈ ಮಾಹಿತಿ ನೀಡಿದ್ದಾರೆ. 2017-18ನೇ ಸಾಲಿನಲ್ಲಿ 98 ಲಕ್ಷ ಟನ್‌ಗಳಷ್ಟು ಕಚ್ಚಾ ತೈಲ ಇರಾನ್‌ನಿಂದ  ಆಮದು ಮಾಡಿಕೊಂಡಿವೆ ಎಂದು ಪ್ರಧಾನ್‌ ತಿಳಿಸಿದ್ದಾರೆ. ಮಂಗಳೂರು ರಿಫೈನರೀಸ್‌ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌, ಐಒಸಿ, ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ. (ಎಚ್‌ಪಿಸಿಎಲ್‌) ಇರಾನ್‌ನಿಂದ ಪ್ರಮುಖವಾಗಿ ಕಚ್ಚಾ ತೈಲ ಖರೀದಿ ಮಾಡುತ್ತಿವೆ ಎಂದಿದ್ದಾರೆ. 

ಎಲ್‌ಎನ್‌ಜಿ ಇಂಧನ ಬಳಕೆ?: ಇದೇ ವೇಳೆ ಸಾರಿಗೆ ಇಂಧನವಾಗಿ ದ್ರವೀಕೃತ ನೈಸರ್ಗಿಕ ಅನಿಲ (ಎನ್‌ಎನ್‌ಜಿ) ಬಳಕೆಗೆ ಕೇಂದ್ರ ಮುಂದಾಗಿದೆ ಎಂದಿರುವ ಪ್ರಧಾನ್‌,  ಅದನ್ನು ಮುಕ್ತ, ಸಾಮಾನ್ಯ ಪರವಾನಗಿ ವ್ಯಾಪ್ತಿಯಲ್ಲಿ ಕಡಿಮೆ ವೆಚ್ಚದಲ್ಲಿ ಆಮದು ಮಾಡಲಾಗುತ್ತಿದೆ ಎಂದಿದ್ದಾರೆ.

ಟಿಪ್ಪಣಿಗೆ ಆಕ್ಷೇಪ: ಲೋಕಸಭೆಯಲ್ಲಿನ ಅಧಿಕಾರಿಗಳ ಗ್ಯಾಲರಿಯಲ್ಲಿ ಅಧಿಕಾರಿ ಯೊಬ್ಬರು ಪ್ರತಿಪಕ್ಷಗಳ ಸಂಸದರು ಮಾಡುವ ಭಾಷಣದ ಟಿಪ್ಪಣಿ ಮಾಡುತ್ತಿರು ವುದಕ್ಕೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿದ್ದು, ಇದನ್ನು ಪರಿಶೀಲಿಸು ವುದಾಗಿ ಸ್ಪೀಕರ್‌ ಭರವಸೆ ನೀಡಿದರು.  

ಪ್ರಸಾರ ಸ್ಥಗಿತ:  ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಟಿಡಿಪಿ ಸಂಸದರು ಗದ್ದಲ ನಡೆಸಿದ ಹಿನ್ನೆಲೆಯಲ್ಲಿ 15 ನಿಮಿಷ  ರಾಜ್ಯಸಭೆ ಟಿವಿಯಲ್ಲಿ ಕಲಾಪ ನೇರ ಪ್ರಸಾರ ಸ್ಥಗಿತಗೊಳಿಸಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಆದೇಶಿದ್ದಾರೆ. 

Advertisement

ವಿಧೇಯಕ ಮಂಡನೆ: ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಅದರಲ್ಲಿ ಥರ್ಡ್‌ ಪಾರ್ಟಿ ಇನ್ಶೂರೆನ್ಸ್‌, ರಸ್ತೆ ಸುರಕ್ಷತೆ, ಆಪ್‌ ಆಧಾರಿತ ಟ್ಯಾಕ್ಸಿ ಸೇವೆ ನಿಯಂತ್ರಣ ವಿಚಾರ ಒಳಗೊಂಡಿದೆ. 

ಅಂಗೀಕಾರ
ಚೆಕ್‌ ಬೌನ್ಸ್‌ ಕೇಸುಗಳನ್ನು ತೀರ್ಮಾನ ಮಾಡುವ ನೆಗೋಶಿಯೇಬಲ್‌ ಇನ್‌ಸ್ಟ್ರೆಮೆಂಟ್‌ (ತಿದ್ದುಪಡಿ) ವಿಧೇಯಕಕ್ಕೆ ಲೋಕಸಭೆ ಅಂಗೀಕಾರ ನೀಡಿದೆ. ಅದರ ಪ್ರಕಾರ ಚೆಕ್‌ ಕ್ಲಿಯರೆನ್ಸ್‌ಗೆ ಹಾಕುವ ಸ್ಥಳದಲ್ಲಿಯೇ ಅದು ಬೌನ್ಸ್‌ ಆದರೆ ಪ್ರಕರಣ ದಾಖಲಿಸುವ ಅನುಕೂಲ ಮಾಡಿದೆ. ಅದು ಸುಪ್ರೀಂಕೋರ್ಟ್‌ ಈ ಹಿಂದೆ ಚೆಕ್‌ ನೀಡಿದ ಸ್ಥಳದಲ್ಲಿಯೇ ಬೌನ್ಸ್‌ ಆದರೆ ಕೇಸು ನೀಡಬೇಕು ಎಂಬ ಆದೇಶವನ್ನು ಬದಲಿಸಲಿದೆ. ಅದರ ಪ್ರಕಾರ ಚೆಕ್‌ ನೀಡಿದ ವ್ಯಕ್ತಿ ಅದನ್ನು ಪಡೆಯುವಾತನಿಗೆ ಶೇ.20ರಷ್ಟು ಮೀರ ದಂತೆ ಕೆಲವೊಂದು ಸಂದರ್ಭದಲ್ಲಿ ಪರಿಹಾರ ನೀಡಲೂ ಅವಕಾಶ ಕಲ್ಪಿಸಿ ಕೊಡಲಿದೆ. ಈ ವಿಧೇಯಕ 1881ರ ಕಾಯ್ದೆಯನ್ನು ಬದಲು ಮಾಡಲಿದೆ. 

ಚರ್ಚೆ ಬಗ್ಗೆ ಆ್ಯಪ್‌ನಲ್ಲಿ ನೋಟಿಸ್‌
ರಾಜ್ಯಸಭೆ ಈಗ ಹೈಟೆಕ್‌ ಆಗಿದೆ. ಸದಸ್ಯರು ಇನ್ನು ಮುಂದೆ ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆಸಲು ಅಥವಾ ಪ್ರಶ್ನೆಗಳನ್ನು ಹೊಸತಾಗಿ ಆರಂಭಿಸಲಾದ ಆ್ಯಪ್‌ ಮೂಲಕ ಸಲ್ಲಿಸಬಹುದು. ಸಭಾಪತಿ ವೆಂಕಯ್ಯ ನಾಯ್ಡು ಈ ಮಾಹಿತಿ ನೀಡಿದ್ದಾರೆ. ಇ-ನೋಟಿಸಸ್‌ ಆ್ಯಪ್‌ ಮೂಲಕ ಶೂನ್ಯ ವೇಳೆ, ಪ್ರಶ್ನೋತ್ತರ ವೇಳೆ, ನಿಲುವಳಿ ಸೂಚನೆ ಗೊತ್ತುವಳಿ, ಅಲ್ಪಕಾಲದ ಚರ್ಚೆ ಬಗ್ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅದರ ಮೂಲಕ ಕೇಳಬಹುದು. 

ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ  
ರಫೇಲ್‌ ಡೀಲ್‌ ಬಗ್ಗೆ ಲೋಕಸಭೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಥವಾ ಪ್ರಧಾನಿ ಮೋದಿ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲು ಕಾಂಗ್ರೆಸ್‌ ಮುಂದಾಗಿದೆ. ರಕ್ಷಣಾ ಒಪ್ಪಂದಗಳಲ್ಲಿ ವೆಚ್ಚವನ್ನು ರಹಸ್ಯವಾಗಿರಿಸಬೇಕು ಎಂಬ ನಿಯಮ ಇಲ್ಲ ಎಂದು ಮಾಜಿ ಸಚಿವ ಎ.ಕೆ.ಆ್ಯಂಟನಿ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸಲ್ಲಿಸಿರುವ ನಿಲುವಳಿ ಸೂಚನೆ ನೋಟಿಸ್‌ ಪರಿಶೀಲಿಸುತ್ತಿರುವುದಾಗಿ ಸ್ಪೀಕರ್‌ ಹೇಳಿದ್ದಾರೆ.

ಲೋಕಮಾನ್ಯ ಬಾಲಗಂಗಾಧರ ತಿಲಕ್‌ ಜನ್ಮದಿನ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅನಂತ ಕುಮಾರ್‌ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ನಗುಮುಖದಿಂದ ಮಾತಾಡಿದ್ದು ಹೀಗೆ.

Advertisement

Udayavani is now on Telegram. Click here to join our channel and stay updated with the latest news.

Next