Advertisement

ಮಹಿಳೆಯರ ಹಕ್ಕು ರಕ್ಷಣೆಯಲ್ಲಿ ಅಧಿಕಾರಿಗಳು ಕೈಜೋಡಿಸಿ: ಶ್ಯಾಮಲಾ

10:32 PM Jan 17, 2020 | Sriram |

ಕಾರ್ಕಳ: ಮಹಿಳೆಯರ ಹಕ್ಕು ಹಾಗೂ ಅವರ ರಕ್ಷಣೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳೊಂದಿಗೆ ಇಲಾಖಾಧಿಕಾರಿಗಳು ಕೈ ಜೋಡಿಸ ಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌ ಅಭಿಪ್ರಾಯಪಟ್ಟರು.ಜ. 16ರಂದು ಕಾರ್ಕಳ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ವಿವಿಧ ಇಲಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಮಹಿಳಾ ಪೊಲೀಸ್‌ ಠಾಣೆಗೆ ಬೇಡಿಕೆ
ಕಾರ್ಕಳ ತಾಲೂಕಿಗೊಂಡು ಮಹಿಳಾ ಪೊಲೀಸ್‌ ಠಾಣೆಯ ಅಗತ್ಯವಿದ್ದು, ಪೊಲೀಸ್‌ ಠಾಣೆ ಸ್ಥಾಪನೆಗೆ ಸರಕಾರಕ್ಕೆ ಮನವಿ ಮಾಡುವಂತೆ ಸೂಚಿಸಿದರು.

ರಾತ್ರಿ ವೇಳೆ ಬಸ್ಸಿಲ್ಲದೆ ಮನೆಗೆ ತಲುಪಲು ಮಹಿಳೆಯರಿಗೆ ಕಷ್ಟವಾದಾಗ ಪೊಲೀಸ್‌ ಇಲಾಖೆಯಿಂದ ಸೂಕ್ತ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂಬ ಶ್ಯಾಮಲಾ ಕುಂದರ್‌ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್‌ ಅಧಿಕಾರಿ, ತುರ್ತು ಸಂದರ್ಭದಲ್ಲಿ ಮಹಿಳೆಯರಿಗೆ ಹೊಯ್ಸಳ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ತುರ್ತು ಸಹಾಯವಾಣಿ ನಂಬರ್‌ಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದರು.

74 ಕೌಟುಂಬಿಕ ಕಲಹ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕುಮಾರ್‌ ನಾಯ್ಕ ಮಾತನಾಡಿ, ಕಾರ್ಕಳದಲ್ಲಿ 74 ಕೌಟುಂಬಿಕ ಕಲಹ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇ. 90ರಷ್ಟು ಪ್ರಕರಣಗಳು ಕೌನ್ಸೆಲಿಂಗ್‌ ಮೂಲಕ ಇತ್ಯರ್ಥವಾದರೆ, ಉಳಿದ ಶೇ. 10 ರಷ್ಟು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದರು.

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಪೊಲೀಸ್‌ ಅಧಿಕಾರಿ, ಸಿಬಂದಿ ವರ್ಗದವರು ಪಾಲ್ಗೊಂಡರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಷಪ್ಪ ಆರ್‌., ತಾಲೂಕು ಪಂಚಾಯತ್‌ ಕಾರ್ಯನಿರ್ವ ಹಣಾಧಿಕಾರಿ ಡಾ| ಮೇ| ಹರ್ಷ ಕೆ.ಬಿ., ತಹಶೀಲ್ದಾರ್‌ ಪುರಂದರ ಹೆಗ್ಡೆ, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಉಪಸ್ಥಿತರಿದ್ದರು.

Advertisement

ಮಹಿಳಾ ಹಾಸ್ಟೆಲ್‌ಗೆ ಭೇಟಿ
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌ ಸಭೆಯ ಅನಂತರ ಕಾರ್ಕಳದಲ್ಲಿನ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಲ್ಲಿನ ಕುಂದುಕೊರತೆ ಕುರಿತು ಸಿಬಂದಿಯಿಂದ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next