Advertisement

ಮಳೆಗಾಲದಲ್ಲೂ ಅಧಿಕಾರಿಗಳ ಬೆವರಿಳಿಸಿದ ಬೇಸಗೆ ನೀರಿನ ಬಿಲ್‌

09:13 PM Aug 16, 2019 | Sriram |

ಬೈಂದೂರು: ಬೇಸಗೆಯಲ್ಲಿ ನೀರಿಗಾಗಿ ಹಾಹಾಕಾರವಿತ್ತು. ಯಾವುದೇ ಕಾರಣಕ್ಕೂ ಗ್ರಾ.ಪಂ. ಜನರಿಗೆ ನೀರು ಕೊಡುವಲ್ಲಿ ವಿಳಂಬ ಮಾಡಬಾರದು ಎಂದು ತಾಕೀತು ಮಾಡಿ ಗ್ರಾ.ಪಂ. ಸಿಬಂದಿಯನ್ನು ಹೈರಾಣಾಗಿಸಿದ ಜಿಲ್ಲಾಡಳಿತ ಇದುವರೆಗೆ ನೀರಿನ ಬಿಲ್‌ ನೀಡದೆ ಸತಾಯಿಸುತ್ತಿದೆ. ಈಗ ಹಣ ನೀಡದ ಪರಿಣಾಮ ಗುತ್ತಿಗೆ ಪಡೆದವರು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರ ಮನೆಬಾಗಿಲಿಗೆ ಬಂದು ಕುಳಿತುಕೊಳ್ಳುತ್ತಿದ್ದಾರೆ. ಹೀಗಾದರೆ ಮುಂದೆ ಬೇಸಗೆಯಲ್ಲಿ ಗ್ರಾ.ಪಂ. ಯಾವ ಧೈರ್ಯದ ಮೇಲೆ ಕೆಲಸ ಮಾಡಬೇಕು ಎಂದು ಕುಂದಾಪುರ ಪಂಚಾಯತ್‌ರಾಜ್‌ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾಶಿವ ಡಿ. ಪಡುವರಿ ಸಂಸದರ ಎದುರು ಜಿಲ್ಲಾಡಳಿತದ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಘಟನೆ ಬೈಂದೂರಿನಲ್ಲಿ ನಡೆದಿದೆ.

Advertisement

ಸಮಸ್ಯೆ ಏನು ?
ಕಳೆದ ಬೇಸಗೆಯಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿ ಕಾಡಿತ್ತು. ಬೈಂದೂರು ಸೇರಿದಂತೆ ರಾಜ್ಯ ದಲ್ಲೂ ಕೂಡ ಜನರಿಗೆ ನೀರಿಗೆ ತೊಂದರೆ ಯಾಗಬಾರದು. ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರಕಾರ ತಿಳಿಸಿತ್ತು. ಹೀಗಾಗಿ ಜಿಲ್ಲಾಡಳಿತ ಪ್ರತಿ ಗ್ರಾ.ಪಂ.ಗಳಿಗೆ ಸುತ್ತೋಲೆ ಕಳುಹಿಸಿ ನೀರಿನ ಪೂರೈಕೆಗಾಗಿ ಟೆಂಡರ್‌ ಪಡೆದು ಮಂಜೂರು ಮಾಡಲು ತಿಳಿಸಿತ್ತು. ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರರ ಮಾರ್ಗದರ್ಶನದಲ್ಲಿ 5 ಲಕ್ಷ ರೂ. ಒಳಗೆ ಸಾಮಾನ್ಯ ನಿಯಮ, ಅದಕ್ಕಿಂತ ಹೆಚ್ಚಿಗೆ ಅನುದಾನಕ್ಕೆ ಈ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತ ನಿರ್ದಿಷ್ಟ ಮೊತ್ತದ ಕುರಿತು ತಿಳಿಸಿಲ್ಲ. ಹೀಗಾಗಿ ಕೆಲವು ಗ್ರಾ.ಪಂ.ಗಳು 25 ರೂ. ಇನ್ನು ಕೆಲವು 30 ರೂ., 35 ರೂಪಾಯಿಗಳಿಗೆ ಟೆಂಡರ್‌ ನೀಡಿ, ಎಗ್ರಿಮೆಂಟ್‌ ಮಾಡಿಕೊಂಡಿದ್ದವು.ಬಹುತೇಕ ಗ್ರಾ.ಪಂ.ಗಳಿಗೆ ಇದುವರೆಗೆ ಹಣ ಮಂಜೂರಾಗಿಲ್ಲ. ಈ ಹಣವನ್ನು ಜಿಲ್ಲಾಡಳಿತದ ನಿರ್ದೇಶನದಂತೆ ತಹ ಶೀಲ್ದಾರ್‌ ಮಂಜೂರು ಮಾಡಬೇಕು. ಆದರೆ ಜಿಲ್ಲಾಡಳಿತ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ 25 ರೂ. ಕಡಿಮೆ ಇದ್ದರೆ ಜಿಲ್ಲಾಡಳಿತ ನೀಡುತ್ತದೆ. ಹೆಚ್ಚಿಗೆ ಇದ್ದರೆ ಗ್ರಾ.ಪಂ. ನೀಡಬೇಕು ಎಂದು ಮೌಖೀಕವಾಗಿ ತಿಳಿಸಿರುವುದು ಈ ಸಮಸ್ಯೆಗೆ ಕಾರಣವಾಗಿದೆ.

ಜಿಲ್ಲಾಧಿಕಾರಿಗಳು ಈ ಬಗ್ಗೆ ಸಮರ್ಪಕ ಕ್ರಮ ಶೀಘ್ರ ತೆಗೆದುಕೊಳ್ಳುವುದಾಗಿ ತಿಳಿಸಿ ದರು. ಇದರ ಜತೆಗೆ ಮರಳಿನ ಕುರಿತು ಜಿಲ್ಲಾಡಳಿತದ ಕ್ರಮದ ಕುರಿತು ಜನ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿ ದರು. ಒಟ್ಟಾರೆಯಾಗಿ ಬೇಸಗೆಯ ನೀರಿನ ಬಿಲ್‌ ಮಳೆಗಾಲದಲ್ಲೂ ಅಧಿಕಾರಿಗಳಿಗೆ ನೀರು ಕುಡಿಸುವುದಂತು ಸತ್ಯ ಎಂದು ಸಭೆಯಲ್ಲಿದ್ದವರು ಹೇಳಿಕೊಳ್ಳುವಂತಾಗಿದೆ.

ಎ.ಸಿ. ಸಮಾಧಾನಕ್ಕೆ ತೃಪ್ತರಾಗದ ಪಿ.ಡಿ.ಒ.
ಈ ಮಧ್ಯೆ ಸಮಜಾಯಿಷಿ ನೀಡಿ ಸಮಧಾನಪಡಿಸಲು ಮುಂದಾದ ಕುಂದಾಪುರ ಸಹಾಯಕ ಕಮಿಷನರ್‌ ಮಧುಕೇಶ್ವರ್‌ ಈಗಾಗಲೇ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ. ಅವರು ಸಮ್ಮತಿಸಿದ್ದಾರೆ ಎಂದರು.
ಆದರೆ ಇದಕ್ಕೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಪಿ.ಡಿ.ಒ.ಗಳು ನಮ್ಮಿಂದ ಯಾವುದೇ ರೀತಿ ಸಮ್ಮತಿ ದೊರೆತಿಲ್ಲ. ಪ್ರತಿ ಪಂಚಾಯತ್‌ನಲ್ಲೂ ಚುನಾಯಿತ ಪ್ರತಿನಿಧಿಗಳಿದ್ದಾರೆ. ಜಂಟಿ ಖಾತೆ ನಿಭಾಯಿಸುವುದರಿಂದ ಕೇವಲ ಅಭಿವೃದ್ಧಿ ಅಧಿಕಾರಿಗಳ ನಿರ್ಧಾರ ಅಂತಿಮವಾಗುವುದಿಲ್ಲ. ಹೀಗಾಗಿ ನೀರಿನ ವಿಷಯದ ಕುರಿತು ಜಿಲ್ಲಾಡಳಿತ ಗ್ರಾ.ಪಂ ಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ ಎಂದಿದ್ದಾರೆ.

ಸಂಸದರು ಕೂಡ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರ ಸಮಸ್ಯೆ ಇತ್ಯರ್ಥಗೊಳಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆಯಾಗದಂತೆ ಗ್ರಾಮ ಪಂಚಾಯತ್‌ಗಳು ಬೇಸಗೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಲ್ಲಿ ಕೆಲಸ ನಿಭಾಯಿಸಲು ಭರವಸೆ ಬೇಕಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.