Advertisement

ಅಧಿಕಾರಿಗಳು, ಸಚಿವರ ವಿದೇಶ ಪ್ರವಾಸಕ್ಕೆ ಅಂಕುಶ

06:00 AM Sep 06, 2018 | Team Udayavani |

ಬೆಂಗಳೂರು: ಅಧಿಕಾರಿಗಳು ಮತ್ತು ಸಚಿವರ ವಿದೇಶ ಪ್ರವಾಸಕ್ಕೆ ರಾಜ್ಯ ಸರ್ಕಾರ ಲಗಾಮು ಹಾಕಿದ್ದು, ಕೆಲವೊಂದು ನಿಯಮಾವಳಿ ರೂಪಿಸಿದೆ.

Advertisement

ವಿದೇಶ ಪ್ರವಾಸಕ್ಕೆ ಅನುಮತಿ ಪಡೆಯಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೂಲಕ ಮುಖ್ಯಮಂತ್ರಿಯವರ ಅನುಮತಿ ಪಡೆಯುವ ಬದಲು ಕೆಲವು ಅಧಿಕಾರಿಗಳು ನೇರವಾಗಿ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡಲಾಗಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅಂಜುಂ ಫ‌ರ್ವೇಜ್‌, ನಿಯಮಾವಳಿಗಳ ಪ್ರಕಾರ ಮನವಿ ಸಲ್ಲಿಸದೆ ನೇರವಾಗಿ ವಿದೇಶ ಪ್ರವಾಸ ಪ್ರಸ್ತಾವನೆ ಮಖ್ಯಮಂತ್ರಿಯವರ ಅನುಮೋದನೆಗೆ ಸಲ್ಲಿಸಿದರೆ ಅಂತಹ ಪ್ರಸ್ತಾವನೆ ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

ವಿದೇಶ ಪ್ರವಾಸ ಸಂದರ್ಭದಲ್ಲಿ ಸಾರಿಗೆ, ವಸತಿ ವೆಚ್ಚ ಮತ್ತು ಇತರೆ ವಿದೇಶಿ ಆತಿಥ್ಯ ಸ್ವೀಕರಿಸುವ ಪ್ರಸ್ತಾವನೆ ಇದ್ದರೆ, ಆತಿಥ್ಯ ಪಡೆದುಕೊಳ್ಳಲು ಅನುಮತಿಗಾಗಿ ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಜತೆ ಸಮಾಲೋಚನೆ ನಡೆಸುವಂತೆಯೂ ಸೂಚಿಸಲಾಗಿದೆ.

ಸಂಬಂಧಿಸಿದ ವಿದೇಶ ಪ್ರವಾಸದ ಉದ್ದೇಶ ಹಾಗೂ ಆ ಪ್ರವಾಸದ ಪರಿಣಾಮವಾಗಿ ಸರ್ಕಾರಕ್ಕೆ, ಅಧಿಕಾರಿಗೆ ಆಗುವ ಅನುಕೂಲ, ಉದ್ದೇಶಿತ ಪ್ರವಾಸದ ಅನುಭವ ಬಳ‌ಕೆಯಿಂದ ರಾಜ್ಯ ಸರ್ಕಾರಕ್ಕೆ ಆಗುವ ಪ್ರತಿಫ‌ಲದ ವಿವರಣೆ ಒದಗಿಸಬೇಕು ಎಂದು ತಿಳಿಸಲಾಗಿದೆ.

Advertisement

ಸಚಿವರ  ನೇತೃತ್ವದ ಅಧಿಕಾರಿಗಳ ನಿಯೋಗ ಹಾಗೂ ಅಧಿಕಾರಿಗಳ ಅಧಿಕೃತ ವಿದೇಶ ಪ್ರವಾಸದ ಪ್ರಸ್ತಾವನೆಗಳನ್ನು ನೇರವಾಗಿ ಮುಖ್ಯಮಂತ್ರಿಯವರ ಅನುಮೋದನೆಗೆ ಕಳುಹಿಸದೆ, ಕಡ್ಡಾಯವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೂಲಕವೇ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಐಎಎಸ್‌ ಅಧಿಕಾರಿಗಳ ವಿದೇಶಿ ಪ್ರವಾಸ ನಿಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆಗಳಿಂದ ವೃಂದ ನಿಯಂತ್ರಣ ಪ್ರಾಧಿಕಾರದ ಕೇಡರ್‌ ಕ್ಲಿಯರೆನ್ಸ್‌ ಪಡೆಯಬೇಕಾಗುತ್ತದೆ. ಈ ರೀತಿ ಆಡಳಿತಾತ್ಮಕವಾಗಿ ಪ್ರಸ್ತಾವನೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆ ಅನುಮತಿ ನೀಡಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next