ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಅಡಿಯಲ್ಲಿ ದಾಖಲಿಸಬೇಕು. ಜೊತೆಗೆ ವ್ಯವಸ್ಥಿತವಾದ ಚಿಕಿತ್ಸೆ ನೀಡಬೇಕು. ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯಾ ಖಾಸಗಿ ಆಸ್ಪತ್ರೆಗಳಿಗೂ ಈ ಕುರಿತು ತಿಳಿಹೇಳಲು ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು.
ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಆಧಾರ್, ಬಿಪಿಎಲ್ ಪಡಿತರ ಚೀಟಿ ಪಡೆದು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಚಿಕಿತ್ಸೆ ನೀಡಬೇಕು. ಇದರಿಂದ ರೋಗಿಗಳು ಭರಿಸುವ ವೆಚ್ಚ ಕಡಿಮೆಯಾಗಲಿದ್ದು ಸಾರ್ವಜನಿಕರಿಗೆ ಸಹಾಯವಾಗಲಿದೆ ಎಂದರು.
ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಸರ್ಕಾರಿ ಆಸ್ಪತ್ರೆಗಳ ಜೊತೆ ಖಾಸಗಿ ಆಸ್ಪತ್ರೆಗಳು ಕೈಜೊಡಿಸಿ ರೋಗಿಗಳಿಗೆ ಗುಣಮಟ್ಟದ ವ್ಯವಸ್ಥಿತ ಚಿಕಿತ್ಸೆ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ ನೋಂದಣಿ ಮಾಡಿಸಿಕೊಂಡಿರುವ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಕುರಿತು ಖಾಸಗಿ ಆಸ್ಪತ್ರೆಗಳಿಗೆ ತಿಳಿವಳಿಕೆ ನೀಡುವ ಕೆಲಸವಾಗಬೇಕು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚಿನ ದರ ವಸೂಲಿ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿಲ್ಲ. ಭವಿಷ್ಯದಲ್ಲೂ ಇಂಥ ಪ್ರಕರಣ ವರದಿ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ, ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ರೋಗ ಲಕ್ಷಣ ಇಲ್ಲದ ರೋಗಿಗಳಿಗೆ ಪ್ರತ್ಯೇಕ ಇರಿಸಿ ಚಿಕಿತ್ಸೆ ನೀಡಲು ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ರೋಗಿಗಳಿಗೆ ಆಹಾರ ಹಾಗೂ ಮೂಲಭೂತ ಸೌಕರ್ಯದ ತೊಂದರೆಗಳು ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಅದರ ಜೊತೆಗೆ ಪ್ರತಿ ನಿತ್ಯ ತಜ್ಞ ವೈದ್ಯರು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು ಜಿಲ್ಲಾಡಳಿತದ ಕಾರ್ಯ ಪ್ರಶಂಸನೀಯ ಎಂದರು.
ಕೋವಿಡ್ ರೋಗಿಗಳನ್ನು ಕರೆದುಕೊಂಡು ಹೋಗಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ 10 ಆಂಬ್ಯುಲೆನ್ಸ್, ಇದರ ಜೊತೆಗೆ ಕೋವಿಡ್ ರೋಗದಿಂದ ಮೃತ ಪಟ್ಟವರ ಅಂತ್ಯಕ್ರಿಯೆಗೆ ನೆರವಾಗಲು 2 ವಾಹನ ಮೀಸಲಿರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಂಬ್ಯುಲೆನ್ಸ್ ಅಗತ್ಯ ಕಂಡು ಬಂದಲ್ಲಿ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಸೂಚಿಸಿದ ಅವರು, ಕೊರೊನಾ ನಿಗ್ರ ಹಕ್ಕೆ ಕೈ ಜೋಡಿಸಿ ಎಂದ ರು. ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಎಸ್ಪಿ ಅನುಪಮ್ ಅಗರವಾಲ, ಜಿಪಂ ಸಿಇಒ ಗೋವಿಂದರೆಡ್ಡಿ, ಎಡಿಸಿ ಡಾ| ಔದ್ರಾಮ್, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು