Advertisement

ಅಧಿಕಾರಿಗಳು ಜನರಲ್ಲಿ ಆತ್ಮಸ್ಥೈರ್ಯ ಮೂಡಿಸಿ

10:46 AM Jul 09, 2019 | Suhan S |

ಚಳ್ಳಕೆರೆ: ಬರಗಾಲದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ಚಿಂತಾಕ್ರಾಂತರಾಗಿದ್ದಾರೆ. ಮಳೆ ಕೈಕೊಡುತ್ತಿರುವುದು ಪ್ರತಿಯೊಬ್ಬರಲ್ಲೂ ಆತಂಕವನ್ನುಂಟು ಮಾಡಿದೆ. ಹಾಗಾಗಿ ಜನರಿಗೆ ಕುಡಿಯುವ ನೀರು ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯವನ್ನು ತಾಲೂಕು ಮಟ್ಟದ ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಸೂಚಿಸಿದರು.

Advertisement

ಇಲ್ಲಿನ ತಾಲೂಕು ಪಂಚಾಯತ್‌ ಕಾರ್ಯಾಲಯದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ರೈತರಿಗೆ ಬಿತ್ತನೆ ಶೇಂಗಾ ವಿತರಣೆಯಲ್ಲಿ ಲೋಪವಾಗುತ್ತಿರುವ ಬಗ್ಗೆ ಸಹಾಯಕ ಕೃಷಿ ನಿರ್ದೇಶಕ ಎನ್‌. ಮಾರುತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಿಸಲು ಕೃಷಿ ಇಲಾಖೆ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಹಾಯಕ ಕೃಷಿ ನಿರ್ದೇಶಕ ಎನ್‌. ಮಾರುತಿ ಮಾತನಾಡಿ, ಕಳೆದ ಸಾಲಿನಲ್ಲಿ ತಾಲೂಕಿನಾದ್ಯಂತ 12,500 ಕ್ವಿಂಟಲ್ ಬಿತ್ತನೆ ಶೇಂಗಾ ಬೀಜವನ್ನು ವಿತರಿಸಲಾಗಿತ್ತು. ಪ್ರಸಕ್ತ ವರ್ಷ 20 ಸಾವಿರ ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಪ್ರತಿನಿತ್ಯ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಿಗೆ 800 ಕ್ವಿಂಟಲ್ ಶೇಂಗಾ ಬೀಜ ಪೂರೈಕೆಯಾಗುತ್ತಿದೆ. ಆದರೆ ರೈತರು ಬೀಜವನ್ನು ಖರೀದಿಸಿ ದಾಸ್ತಾನು ಮಾಡಿದ್ದು ಇನ್ನೂ ಬಿತ್ತನೆ ಕಾರ್ಯ ಆರಂಭಿಸಿಲ್ಲ. ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯ ಚುರುಕಾಗಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕೃಷಿ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ವಾಡಿಕೆ ಮಳೆಯಾಗಿದೆ ಎಂದು ವರದಿ ನೀಡಿದ್ದೇಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಯಾವ ಗ್ರಾಮದಲ್ಲೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರತಿನಿತ್ಯ ತಾಪಂ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್‌, ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಚರ್ಚಿಸಿ ನೀರಿನ ಸಮಸ್ಯೆ ನಿವಾರಣೆ ಮಾಡಬೇಕು. ಶುದ್ದ ಕುಡಿಯುವ ನೀರು ಘಟಕಗಳಿಗೆ ಟ್ಯಾಂಕರ್‌ ಮೂಲಕವೇ ನೀರು ಸರಬರಾಜು ಮಾಡಬೇಕು. ಎಷ್ಟೇ ಹಣ ಖರ್ಚಾದರೂ ಚಿಂತಿಸದೆ ಜನರಿಗೆ ನೀರು ಕೊಡಿ ಎಂದರು.

Advertisement

ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಪ್ರತಿ ನಿತ್ಯ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 30 ಕಡೆ ಹೊಸ ಕೊಳವೆಬಾವಿ ಕೊರೆಸುವಂತೆ ಬೇಡಿಕೆ ಬಂದಿದೆ ಎಂದರು. ಭೂಗರ್ಭ ಶಾಸ್ತ್ರಜ್ಞರನ್ನು ಕರೆಸಿ ಸ್ಥಳ ತನಿಖೆ ನಡೆಸಿ ಕೊಳವೆಬಾವಿ ಕೊರೆಸುವಂತೆ ಸಲಹೆ ನೀಡಿದರು.

ಪಶು ವೈದ್ಯಾಧಿಕಾರಿ ಡಾ| ಹನುಮಪ್ಪ ಮಾತನಾಡಿ, ತಾಲೂಕಿನ ಒಟ್ಟು 6 ಗೋಶಾಲೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. ಅವುಗಳಿಗೆ ಪ್ರತಿನಿತ್ಯ ನೀರು ಹಾಗೂ ಮೇವು ವಿತರಿಸಲಾಗುತ್ತಿದೆ ಎಂದರು. ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ ಮಾತನಾಡಿ, ಯಾವುದೇ ಗೋಶಾಲೆಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಜಾಗ್ರತೆ ವಹಿಸಲಾಗಿದ್ದು, ಸಕಾಲದಲ್ಲಿ ಮೇವು ಪೂರೈಕೆ ಮಾಡಲಾಗುತ್ತದೆ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ| ಎನ್‌. ಪ್ರೇಮಸುಧಾ ಮಾತನಾಡಿ, ಕ್ಷೇತ್ರದ ಯಾವ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ವೈದ್ಯರ ಕೊರತೆ ಇಲ್ಲ. ಔಷಧ ದಾಸ್ತಾನು ಸಮಪರ್ಕವಾಗಿದೆ. ಮೂರ್‍ನಾಲ್ಕು ಕೇಂದ್ರಗಳಲ್ಲಿ ಮಾತ್ರ ಶುಶ್ರೂಷಕಿಯರ ಕೊರತೆ ಇದೆ. ಪರಶುರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ನೇಮಿಸುವಂತೆ ಆರೋಗ್ಯ ಸಚಿವರು ನಿರ್ದೇಶನ ನೀಡಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು.

ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಗರ್ಭಿಣಿಯರು ಹಾಗೂ ಬಾಣಂತಿಯರ ಬಗ್ಗೆ ವಿಶೇಷ ಗಮನ ಹರಿಸಬೇಕು. ವೈದ್ಯರು ಸಕಾಲದಲ್ಲಿ ಆಸ್ಪತ್ರೆಯಲ್ಲಿದ್ದು, ತ್ವರಿತ ಗತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಶಾಸಕರು ಸೂಚನೆ ನೀಡಿದರು.

ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಟಿ. ರಘುಮೂರ್ತಿ, ನಿಮ್ಮ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸುವ ಕುರಿತು ಚಿಂತನೆ ನಡೆಸಬೇಕು. ಇಲಾಖೆಯ ಸೌಲಭ್ಯಗಳ ಬಗ್ಗೆ ಪ್ರಚಾರ ಕೈಗೊಳ್ಳಬೇಕು. ರೈತರಿಗೆ ಸರ್ಕಾರದಿಂದ ಸಬ್ಸಿಡಿ ಹಾಗೂ ಯೋಜನೆಗಳ ಬಗ್ಗೆ ನಿಖರ ಮಾಹಿತಿ ನೀಡಬೇಕೆಂದರು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಪ್ರತಿ ನಿತ್ಯ ನಿಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಅವಶ್ಯವಿದ್ದಲ್ಲಿ ನಾನೇ ಭೇಟಿ ನೀಡಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next