ಶಿವಮೊಗ್ಗ: ಕೋವಿಡ್-19 ಕಾಲದಲ್ಲಿ ‘ಅಂತ್ಯ ಸಂಸ್ಕಾರ’ ಎಂಬ ಶಬ್ಧವೂ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ಬೀದಿಯಲ್ಲಿ ಬಿಟ್ಟ ಸೋಂಕಿತನ ಶವ, ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದ ಗ್ರಾಮಸ್ಥರು, ಒಂದೇ ಗುಂಡಿಯಲ್ಲಿ ಹಲವಾರು ಶವಗಳು ಎಂಬೆಲ್ಲಾ ಸುದ್ದಿಗಳನ್ನು ಕೇಳಿದ ಬಳಿಕ ಮತ್ತೊಂದು ಅಮಾನವೀಯ ಘಟನೆಯ ಸುದ್ದಿ ಇಲ್ಲಿದೆ. ತಮ್ಮ ಕೆಲಸ ಮಾಡಲು ನಿರ್ಲಕ್ಷ್ಯ ತೋರಿದ ಪಾಲಿಕೆ ಅಧಿಕಾರಿಗಳು ಚಿತಾಗಾರದಲ್ಲಿ ಶವವಿಟ್ಟು ಹೋದ ಕಾರಣ, ಬೀದಿ ನಾಯಿಗಳು ಶವವನ್ನು ಎಳೆದಾಡಿದ ಅಮಾನವೀಯ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಈ ಘಟನೆ ನಡೆದಿದ್ದು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ. ಕೋವಿಡ್ 19 ಸೋಂಕಿನಿಂದ ವೃದ್ಧರೊಬ್ಬರು ಶುಕ್ರವಾರ ಮೃತಪಟ್ಟಿದ್ದರು. ಕಾನೂನು ರೀತಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಬೇಕಿದ್ದ ಪಾಲಿಕೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವ್ಯಕ್ತಿಯ ಶವವನ್ನು ಶಿವಮೊಗ್ಗದ ರೋಟರಿ ಚಿತಾಗಾರಕ‌್ಕೆ ತಂದ ಅಧಿಕಾರಿಗಳು ಅಲ್ಲಿ ಶವವಿಟ್ಟು ಪೂರ್ಣ ಸಂಸ್ಕಾರ ಮಾಡದೇ ಶವದ ಮೇಲೆ ಕಟ್ಟಿಗೆ ಇಟ್ಟು ಹೊರಟು ಹೋಗಿದ್ದಾರೆ. ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅನಾಥ ಶವ ಕಂಡ ನಾಯಿಗಳು, ಆಹಾರದ ಆಸೆಯಿಂದ ಎಳೆದಾಡಿದೆ!
ಮಧ್ಯರಾತ್ರಿ ಸಮಯದಲ್ಲಿ ನಾಯಿಗಳು ಸೋಂಕಿತನ ಶವವನ್ನು ಏಳೆದಾಡುತ್ತಿರುವುದನ್ನು ಕಂಡ ರಾಜೀವ್ ಗಾಂಧಿ ಬಡಾವಣೆ ನಾಗರೀಕರು ಆತಂಕಕ್ಕೆ ಒಳಗಾಗಿದ್ದರು. ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎಚ್.ಸಿ.ಯೋಗೀಶ್ ಮತ್ತು ಕಾಂಗ್ರೆಸ್ ಮುಖಂಡ ರಂಗೇಗೌಡ ಸ್ಥಳೀಯರೊಂದಿಗೆ ಸೇರಿ ಪ್ರತಿಭಟನೆ ಆರಂಭಿಸಿದರು.
ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಚಿದಾನಂದ ವಟಾರ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಮಧ್ಯರಾತ್ರಿ ಎರಡು ಗಂಟೆ ವೇಳೆಗೆ ನಡೆದ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯ ಸಂಸ್ಕಾರ ಮಾಡಲಾಯಿತು.
ಒಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ, ಅಮಾನವೀಯ ನಡೆಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ