Advertisement

ಅಧಿಕಾರಿಗಳ ಸೋಗಿನಲ್ಲಿ ಲಾರಿ ಚಾಲಕರಿಂದ ವಸೂಲಿ ಯತ್ನ:ಸೆರೆ

12:55 AM Apr 09, 2019 | Team Udayavani |

ಕೋಟ: ಅಖೀಲ ಕರ್ನಾಟಕ ನೆಲ,ಜಲ,ಪರಿಸರ ಸಂರಕ್ಷಣ ವೇದಿಕೆಯ ಪದಾಧಿಕಾರಿಗಳು ಎಂದು ಹೇಳಿಕೊಂಡು, ಅಧಿಕಾರಿಗಳ ಶೈಲಿಯಲ್ಲಿ ಕಲ್ಲು ಸಾಗಾಟದ ವಾಹನಗಳನ್ನು ಅಡ್ಡಗಟ್ಟಿ, ಪರಿಶೀಲನೆ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಲಾರಿ ಮಾಲಕರು ಪೊಲೀಸರಿಗೊಪ್ಪಿಸಿದ ಘಟನೆ ಸೋಮವಾರ ಸಾೖಬ್ರಕಟ್ಟೆ ಸಮೀಪದ ಗಿರಿಕೆಮಠದಲ್ಲಿ ನಡೆದಿದೆ.

Advertisement

ಉಡುಪಿ ಲಕ್ಷ್ಮೀಂದ್ರ ನಗರದ ನಿವಾಸಿ ಶ್ರೀಲತಾ ಶೆಟ್ಟಿ (48), ಆಕೆಯ ಗಂಡ ಉದಯ ಕುಮಾರ್‌ ಶೆಟ್ಟಿ (49) ಉಡುಪಿ ಕಕ್ಕುಂಜೆಯ ನಿತ್ಯಾನಂದ ಶೆಟ್ಟಿ (53) ಹಾಗೂ ಸಂತೆಕಟ್ಟೆ ನಿವಾಸಿ ಗುರುಪ್ರಸಾದ ಶೆಟ್ಟಿ (49) ಆರೋಪಿಗಳು.

ಪರಿಸರ ಸಂರಕ್ಷರಣೆ
ಹೆಸರಲ್ಲಿ ಹಣ ವಸೂಲಿ
ಕಾರಿನಲ್ಲಿ ಆಗಮಿಸಿದ ಆರೋಪಿ ಗಳಾದ ಶ್ರೀಲತಾ ಶೆಟ್ಟಿ ತಾನು ನೆಲ, ಜಲ, ಪರಿಸರ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷೆ ಹಾಗೂ ಉದಯ ಕುಮಾರ್‌ ಶೆಟ್ಟಿ ಕಾರ್ಯದರ್ಶಿ ಮತ್ತು ನಿತ್ಯಾನಂದ ಜಿಲ್ಲಾಧ್ಯಕ್ಷನೆಂದು ಪರಿಚಯಿಸಿಕೊಂಡು ಗರಿಕೆಮಠದಿಂದ ಕಲ್ಲುಸಾಗಾಟ ಮಾಡುತ್ತಿದ್ದ ಉಪೇಂದ್ರ ನಾಯ್ಕ ಎನ್ನುವವರ ವಾಹನವನ್ನು ಅಡ್ಡಗಟ್ಟಿ ಟ್ರಿಪ್‌ಶೀಟ್‌ ಮುಂತಾದ ದಾಖಲೆಗಳನ್ನು ಕೇಳಿದ್ದರು. ತೋರಿಸದಿದ್ದಾಗ ನಿಮ್ಮ ವಾಹನವನ್ನು ಸೀಝ್ ಮಾಡಿ ಗಣಿ ಇಲಾಖೆಗೆ ನೀಡುತ್ತೇನೆ ಎಂದು ಹೆದರಿಸಿರುತ್ತಾರೆ ಹಾಗೂ ಅನಂತರ 5 ಸಾ.ರೂ. ನೀಡಿದರೆ ಬಿಡುವುದಾಗಿ ತಿಳಿಸಿದ್ದರು. ಅಷ್ಟು ಹಣ ಇಲ್ಲ ಎಂದಾಗ 2 ಸಾ.ರೂ. ಪಡೆದಿದ್ದಾರೆ. ಅಮೃತ್‌ ಪೂಜಾರಿ ಎನ್ನುವವರಿಂದ 1, 500 ರೂ. ವಸೂಲಿ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಬಂಧನ
ಲಾರಿ ಚಾಲಕ ಉಪೇಂದ್ರ ಅವರು ಈ ವಿಚಾರವನ್ನು ಅನಿಲ್‌ ಕಿಣಿ ಎಂಬವರಿಗೆ ದೂರವಾಣಿ ಮೂಲಕ ತಿಳಿಸಿದರು. ಅವರು ಸಮೀಪದ ಕೋರೆಯಲ್ಲಿದ್ದ ಕಿರಣ್‌ ಪೂಜಾರಿ, ಗಣೇಶ್‌ ಎಂಬ ವರ ಜತೆ ಸ್ಥಳಕ್ಕಾಗಮಿಸಿ ಆರೋಪಿಗಳನ್ನು ವಿಚಾರಿಸಿ, ಬಳಿಕ ಅನುಮಾನಗೊಂಡು ಕೋಟ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ಗಣಿಗಾರಿಕೆಗಳೇ ಟಾರ್ಗೆಟ್‌
ಆರೋಪಿಗಳು ಪರಿಸರ ಸಂರಕ್ಷಣೆಯ ಹೆಸರಲ್ಲಿ ಗಣಿಗಾರಿಕೆ ಹಾಗೂ ಲಾರಿ,ಟಿಪ್ಪರ್‌ ವಾಹನಗಳನ್ನು ಅಡ್ಡಗಟ್ಟಿ ಇಲಾಖೆಯ ಅಧಿಕಾರಿಗಳ ಸ್ಟೆ ಲ್‌ನಲ್ಲೇ ದಾಖಲೆ ಪರಿಶೀಲಿಸುತ್ತಿದ್ದರು ಮತ್ತು ಕೇಸು ದಾಖಲಿಸುವ ಬೆದರಿಕೆಯೊಡ್ಡುತ್ತಿದ್ದರು ಎಂದು ಲಾರಿ ಮಾಲಕರು ಆರೋಪಿಸಿದ್ದಾರೆ.

Advertisement

ಠಾಣೆಯ ಬಳಿ ಜಮಾಯಿಸಿದ ಲಾರಿ ಮಾಲಕರು
ಲಾರಿ ಹಾಗೂ ಕೋರೆಯ ಮಾಲಕರು ಮತ್ತು ಲಾರಿ ಯೂನಿ ಯನ್‌ ಸಂಘಟನೆ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಠಾಣೆಯ ಬಳಿ ಜಮಾಯಿಸಿದರು. ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬ್ರಹ್ಮಾವರ ಸಿಐ ಪೂವಯ್ಯ ಹಾಗೂ ಕೋಟ ಠಾಣೆ ಉಪ ನಿರೀಕ್ಷಕ ರಫೀಕ್‌ ಎಂ. ಅವರು ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next