Advertisement

ಹಾನಿ ಸ್ಥಳಕ್ಕೆ ಬಾರದ ಅಧಿಕಾರಿಗಳು: ಆಕ್ರೋಶ

01:14 AM Nov 18, 2021 | Team Udayavani |

ಕುಂದಾಪುರ: ಅಕಾಲಿಕ ಮಳೆಯಿಂದ ಉಭಯ ಜಿಲ್ಲೆಗಳಲ್ಲಿ ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಭತ್ತ ಬೆಳೆ ನಾಶವಾಗಿ ಕೃಷಿಕರು ಕಂಗಾಲಾಗಿ ದ್ದಾರೆ. ಆದರೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ನಷ್ಟ ಲೆಕ್ಕ ಹಾಕಿ ಸರಕಾರದಿಂದ ಸೂಕ್ತ ಪರಿಹಾರ ಸಿಗುವಂತೆ ಮಾಡಬೇಕಿದ್ದ ಅಧಿಕಾರಿಗಳು ಎಲ್ಲೆಡೆ ತೆರಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮಳೆಯಿಂದ ನೂರಾರು ಹೆಕ್ಟೇರ್‌ನಲ್ಲಿ ಕಟಾವಿಗೆ ಬಂದ ಭತ್ತ ನೀರು ಪಾಲಾಗಿದೆ. ಉಳಿದದ್ದು ಗದ್ದೆಯಲ್ಲೇ ಕೊಳೆಯುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಬೆಳೆ ನಷ್ಟದ ಬಗ್ಗೆ ಖಚಿತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಹೆಬ್ರಿ, ಬ್ರಹ್ಮಾವರ, ಕಾರ್ಕಳ, ಉಡುಪಿ, ಕಾಪು ತಾಲೂಕುಗಳ ಬಹುತೇಕ ಕಡೆಗಳಲ್ಲಿ ಭತ್ತದ ಕೃಷಿಗೆ ಹಾನಿಯಾಗಿದೆ. ಆದರೆ ಅಧಿಕಾರಿಗಳು ಭೇಟಿ ಕೊಟ್ಟಿರುವುದು ಬೆರಳೆಣಿಕೆ ಕಡೆಗಳಿಗೆ ಮಾತ್ರ. ಕುಂದಾಪುರದ ಮಡಾಮಕ್ಕಿ, ಶೇಡಿಮನೆ, ವಕ್ವಾಡಿ, ಹೆಮ್ಮಾಡಿ, ಹೊಸಂಗಡಿ, ಅಮಾಸೆಬೈಲು ಮತ್ತಿತರ ಅನೇಕ ಕಡೆಗಳಿಗೆ ಯಾರೂ ಬಂದಿಲ್ಲ. ದಕ್ಷಿಣ ಕನ್ನಡದ ಬೆಳ್ತಂಗಡಿ, ಪುತ್ತೂರು, ಸುಳ್ಯ ಸಹಿತ ಬಹುತೇಕ ತಾಲೂಕು ವ್ಯಾಪ್ತಿಯಲ್ಲಿ ಹಾನಿಯಾಗಿದೆ. ಆದರೂ ಸ್ಥಳಕ್ಕೆ ಭೇಟಿ ನೀಡಿ, ಖಚಿತ ಮಾಹಿತಿ ಕಲೆಹಾಕುವ ಪ್ರಯತ್ನ ಕೃಷಿ ಇಲಾಖೆಯಿಂದ ಆಗಿಲ್ಲ. ಹಾನಿ ವಿವರವನ್ನು ಖುದ್ದಾಗಿ ಸಂಗ್ರಹಿಸಿ ಸರಕಾರಕ್ಕೆ ಸಲ್ಲಿಸಬೇಕಾದ ಕೃಷಿ ಇಲಾಖೆಯೇ ಸುಮ್ಮನಿದೆ ಎಂಬ ಆರೋಪ ರೈತರದ್ದು.

ಬಹುತೇಕ ಹುದ್ದೆ ಖಾಲಿ
ಉಡುಪಿ ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಒಟ್ಟು 136 ಹುದ್ದೆಗಳು ಮಂಜೂರಾಗಿದ್ದು, ಕೇವಲ 44 ಭರ್ತಿಯಾಗಿವೆ. 92 ಹುದ್ದೆಗಳು ಖಾಲಿಯಿವೆ. ಈ ಪೈಕಿ 22 ಕೃಷಿ ಅಧಿಕಾರಿ ಹುದ್ದೆ ಇರಬೇಕಿದ್ದಲ್ಲಿ 8 ಮಂದಿ ಮಾತ್ರ ಇದ್ದಾರೆ; 14 ಖಾಲಿಯಿವೆ. ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು 45 ಅಗತ್ಯವಿದ್ದು, 10 ಭರ್ತಿಯಿವೆ, 35 ಖಾಲಿಯಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 20ರಷ್ಟು ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಬಾಕಿ ಶೇ. 80ರಷ್ಟು ಖಾಲಿಯಿವೆ. ಎಲ್ಲ ತಾಲೂಕುಗಳಲ್ಲಿಯೂ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳಲ್ಲಿ ಭರ್ತಿಯಾಗಿರುವುದು ಕೆಲವೇ ಕೆಲವು ಹುದ್ದೆ ಮಾತ್ರ. ಇದರಿಂದ ಕೃಷಿಕರು ಹೈರಾಣಾಗುತ್ತಿದ್ದಾರೆ. ಸರಕಾರವಾದರೂ ಪರಿಹಾರ ಮೊತ್ತವನ್ನು ಹೆಚ್ಚಿಸಿ ನಮ್ಮ ಬೆಂಬಲಕ್ಕೆ ಬರಬೇಕು ಎಂಬುದು ರೈತರ ಆಗ್ರಹ.

ಇದನ್ನೂ ಓದಿ:ಡಿಸೆಂಬರ್ ಅಂತ್ಯದೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಂತೆ ಹೈಕೋರ್ಟ್​ ನಿರ್ದೇಶನ

Advertisement

ಸಿಬಂದಿ ಕೊರತೆಯಿಂದ ಕೃಷಿ
ಸಂಬಂಧಿ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸಲಾಗು ತ್ತಿಲ್ಲ. ಆದರೂ ಇರುವ ಸಿಬಂದಿಯನ್ನು ಬಳಸಿಕೊಂಡು ಗರಿಷ್ಠ ಪ್ರಯತ್ನ ಮಾಡ ಲಾಗುತ್ತಿದೆ. ಸಾಧ್ಯ ವಾದಷ್ಟು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮಾಹಿತಿ ಬಂದ ಬಹುತೇಕ ಪ್ರದೇಶಗಳಿಗೆ ಭೇಟಿ ನೀಡಿ, ಮಾಹಿತಿ ಕಲೆಹಾಕಲಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಪ್ರತೀ ತಿಂಗಳು ಮೇಲಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ.
– ಸೀತಾ, ಕೆಂಪೇಗೌಡ, ಜಂಟಿ ನಿರ್ದೇಶಕರು,
ಕೃಷಿ ಇಲಾಖೆ, ದಕ್ಷಿಣ ಕನ್ನಡ, ಉಡುಪಿ

ನಿರಂತರ ಮಳೆಯಿಂದಾಗಿ ವಕ್ವಾಡಿ ಭಾಗದಲ್ಲಿ ಭತ್ತದ ಕೃಷಿಗೆ ಅಪಾರ ಹಾನಿಯಾಗಿದ್ದು, ಯಾವೊಬ್ಬ ಅಧಿಕಾರಿಯೂ ಇಲ್ಲಿಗೆ ಭೇಟಿ ನೀಡಿಲ್ಲ. ಅಧಿಕಾರಿಗಳು ಸ್ವತಃ ಭೇಟಿ ನೀಡಿ, ಹಾನಿಯ ಮಾಹಿತಿ ಕಲೆಹಾಕುವ ಕಾರ್ಯ ಮಾಡಬೇಕು.
-ಸತೀಶ್‌ ಶೆಟ್ಟಿ ವಕ್ವಾಡಿ, ಕೃಷಿಕರು

ಮಳೆಗೆ ಮಡಾಮಕ್ಕಿ,
ಶೇಡಿಮನೆ ಸುತ್ತಲಿನ ಗ್ರಾಮಗಳ
ಕೃಷಿಕರು ಕಂಗಾಲಾಗಿದ್ದಾರೆ. ಅರ್ಜಿ ಸಲ್ಲಿಸಿ, ಪರಿಹಾರ ಸಿಗುವಾಗ ಎಷ್ಟು ತಿಂಗಳು ಬೇಕೋ ಗೊತ್ತಿಲ್ಲ. ಹಕ್ಕು ಪತ್ರ ಇದ್ದ ರೈತರು ಅರ್ಜಿ ಸಲ್ಲಿಸಿ ಪರಿಹಾರ ಪಡೆಯುತ್ತಾರೆ. ಆದರೆ ಹಕ್ಕು ಪತ್ರ ಇಲ್ಲದ ರೈತರ ಪಾಡೇನು? ಅವರು ಬೆಳೆದ ಬೆಳೆ ನಷ್ಟವಾದರೆ ಪರಿಹಾರ ಕೊಡುವವರು ಯಾರು? ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳದಲ್ಲಿಯೇ ಪರಿಹಾರ ಘೋಷಿಸುವಂತಾಗಬೇಕು.
-ಪ್ರತಾಪ್‌ ಶೆಟ್ಟಿ ಮಡಾಮಕ್ಕಿ, ಕೃಷಿಕರು

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next