Advertisement

ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳ ತರಾಟೆ

05:50 PM Jun 25, 2022 | Team Udayavani |

ಸವದತ್ತಿ: ಕೆಆರ್‌ಡಿಎಲ್‌ ಪ್ರಭುಕುಮಾರ, ಜಿಪಂ ಎಇಇ ಎಚ್‌.ಸಿ. ತಳವಾರ ಸೇರಿ ಅಪೂರ್ಣ ಮಾಹಿತಿಯೊಂದಿಗೆ ತಾಪಂನಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಗೆ ಹಾಜರಾದ ಅಧಿಕಾರಿಗಳನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ತರಾಟೆಗೆ ತೆಗೆದುಕೊಂಡರು.

Advertisement

ಒಳಾಂಗಣ ಕ್ರೀಡಾಂಗಣ ನಿರ್ಮಿಸಲು 1 ಕೋಟಿ ರೂ. ಮೀಸಲಿರಿಸಿ 6 ವರ್ಷ ಕಳೆದಿವೆ. ಕಾಮಗಾರಿ ಪೂರ್ಣಗೊಂಡಿಲ್ಲ ಏಕೆ? ಎಂದು ಮಾಮನಿ ಪ್ರಶ್ನಿಸಿದರು. ಇದಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲವೆಂದು ಲ್ಯಾಂಡ್‌ ಆರ್ಮಿ ಪ್ರಭುಕುಮಾರ ತಿಳಿಸಿದರು. ಅನುದಾನವಿದ್ದ ಕಾಮಗಾರಿಗಳೂ ನಡೆದಿಲ್ಲ. ಸಿ.ಸಿ ರಸ್ತೆಗೆ ನಾಗಾಲೋಟ ಹಾಗೂ ಕಟ್ಟಡ ಕಾಮಗಾರಿಗೆ ಆಮೆ ಗತಿ ವೇಗವಿದೆ.

ಎಲ್ಲದಕ್ಕೂ ಸರ್ಕಾರವೇ ಮುಂಗಡ ನೀಡುವುದಾದರೆ ನಿಗಮದಿಂದ ಶೇ.3 ಕಮೀಷನ್‌ ಏಕೆ ಪಡೆಯುತ್ತೀರಿ? ಎಂದು ಅಸಮಾದಾನ ವ್ಯಕ್ತಪಡಿಸಿ, ಅ.15ಕ್ಕೆ ಕ್ರೀಡಾಂಗಣ ಉದ್ಘಾಟನೆ ಆಗಬೇಕು ಎಂದು ಮಾಮನಿ ಸೂಚಿಸಿದರು.

ನಿಮ್ಮಲ್ಲಿಯ ಹಾಗೂ ಇಲ್ಲಿ ಇರಿಸಿದ ಮಾಹಿತಿ ಬೇರೆ ಏಕೆಂದು ಜಿಪಂ ಎಇಇ ತಳವಾರ ಅವರನ್ನು ಪ್ರಶ್ನಿಸಿ, ಯರಗಟ್ಟಿ, ಸತ್ತಿಗೇರಿಗಳು ಅಭಿವೃದ್ಧಿ ಕಂಡಿಲ್ಲ. ಯರಗಟ್ಟಿಯಲ್ಲಿ ಪೈಪ್‌ಲೈನ್‌ ಒಡೆದು ರಸ್ತೆ ಮೇಲೆ ನೀರು ನಿಲ್ಲುವಂತಾಗಿದೆ. ಗುತ್ತಿಗೆದಾರನಿಗೆ ತಿಳಿಸಿ. ಇಲ್ಲವೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಜೆಜೆಎಂ ಕಾಮಗಾರಿಗೆ ಜಾಲಿಕಟ್ಟಿ, ಚಿಕ್ಕಉಳ್ಳಿಗೇರಿಯಲ್ಲಿ ಮಾತ್ರ ಚಾಲನೆ ನೀಡಲಾಗಿದೆ. ಉಳಿದವು ಗಣನೆಗಿಲ್ಲ. ಮುಂದಿನ ಸಭೆಗೆ ಗ್ರಾಮವಾರು ಮಾಹಿತಿ ಸಲ್ಲಿಸಲು
ತಿಳಿಸಿದರು.

ಶಿರಸಂಗಿ, ಮುನವಳ್ಳಿ ಸೇರಿ ಹಲವೆಡೆ ಸಣ್ಣ ರೈತರಿಗೆ ಬೀಜ-ಗೊಬ್ಬರ ಕೊರತೆ ಇದೆ. ಬೂದಿಗೊಪ್ಪ ಗ್ರಾಮದ ರಸ್ತೆ ಮೇಲಿನ 150ಕ್ಕೂ ಹೆಚ್ಚಿನ ಎಲ್ಲ ಸಮುದಾಯದ ಹೂವಿನ ವ್ಯಾಪಾರಿಗಳಿಗೆ ದೂಡುವ ಗಾಡಿಯಿಲ್ಲ. ಬೇರೆ ತಾಲೂಕಿನಲ್ಲಿ ಗಾಡಿ ವ್ಯವಸ್ಥೆಯಿದೆ. ಹೂವು ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ತೋಟಗಾರಿಕೆ ಇಲಾಖೆಯಿಂದ ವ್ಯವಸ್ಥೆ ಕಲ್ಪಿಸಲು ಸೂಚಿದರು.

Advertisement

ತಾಲೂಕಿನಲ್ಲಿ 5 ದೈಹಿಕ, 10 ಮುಖ್ಯಗುರುಗಳ ಹುದ್ದೆ ಖಾಲಿ ಇದೆ. ತೆಗ್ಗಿಹಾಳ, ಜಕಬಾಳಗಳಲ್ಲಿ ನಿವೃತ್ತಿ ಕಾರಣ ಬೇರೆ ಶಿಕ್ಷಕರಿಗೆ ಅಧಿ ಕಾರ ನೀಡಲಾಗಿದೆ. ತಾಲೂಕಿನಲ್ಲಿ ಶೇ.70 ಪುಸ್ತಕ ಹಂಚಿಕೆಯಾಗಿದೆ. ಕೆಲ ಅನುದಾನರಹಿತ ಶಾಲೆಗಳಿಗೆ ಹಣ ಪಾವತಿಸದ ಕಾರಣ ಪೂರೈಕೆ ಆಗಿಲ್ಲವೆಂದು ಬಿಇಒ ಎಸ್‌.ಸಿ. ಕರೀಕಟ್ಟಿ ಸಭೆಗೆ ಮಾಹಿತಿ ನೀಡಿದಾಗ ಸಿ.ಎಂ. ಮಾಮನಿ ಚಾರಿಟೇಬಲ್‌ನಿಂದ ಆ ಶಾಲೆಗಳಿಗೆ ಪುಸ್ತಕ ಪೂರೈಸಲಾಗುವುದೆಂದು ಮಾಮನಿ ತಿಳಿಸಿದರು.

ಇಲ್ಲಿ ಕೇವಲ 9 ಇಲಾಖೆ ಚರ್ಚಿತವಾದವು. ಇನ್ನುಳಿದ ಇಲಾಖೆ ಹಾಗೂ ಮಾಹಿತಿ ಇರದವುಗಳಿಗೆ ಜು.8ರ ಕೆಡಿಪಿ ಸಭೆ ಮುಂದುವರಿಸಲಾಗುವುದು ಎಂದು ಸೂಚಿಸಲಾಯಿತು. ಈ ವೇಳೆ ಆಡಳಿತಾಧಿಕಾರಿ ಶಶಿಧರ ಕುರೇರ, ಯಶವಂತಕುಮಾರ, ಪ್ರಶಾಂತ ಪಾಟೀಲ, ಎಂ.ಎಂ. ಮಠದ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next