ಬೆಂಗಳೂರು: ಸರ್ಕಾರಿ ಸೇವೆಗಳಿಗಾಗಿ ಲಂಚ ಕೇಳಿದ್ದ ಅಧಿಕಾರಿಗಳ ವಿರುದ್ಧ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ನಡೆಸಿದ್ದ ದೀರ್ಘಕಾಲದ ಹೋರಾಟದ ಫಲವಾಗಿ ಬಿಬಿಎಂಪಿಯ ಇಬ್ಬರು ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಒಬ್ಬ ಅಧಿಕಾರಿ ಅಮಾನತುಗೊಂಡಿದ್ದಾರೆ.
ಸಾರ್ವಜನಿಕರ ದೂರಿನ ಅನ್ವಯ ವೇದಿಕೆಯು ಕಳೆದ ಕೆಲ ತಿಂಗಳಿಂದ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿತು. ಆ ಅಧಿಕಾರಿಗಳ ವಿರುದ್ಧ ಸಾಕ್ಷ್ಯಗಳನ್ನು ಕಲೆಹಾಕಿತು. ಶಿಸ್ತು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ಕೂಡ ನಡೆಸಿತು. ಪರಿಣಾಮವಾಗಿ ಮೂವರು ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಇದು ಹೋರಾಟಕ್ಕೆ ಸಿಕ್ಕ ಜಯ ಎಂದು ವೇದಿಕೆಯ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಲೋಕಾಯುಕ್ತ ಸಂಸ್ಥೆಗಳಿಗೆ ಪೂರಕವಾಗಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಶೋಷಿತ ವ್ಯಕ್ತಿ ವೇದಿಕೆಗೆ ದೂರು ನೀಡಬಹುದು. ಅವರ ಹೆಸರನ್ನೂ ಗೌಪ್ಯವಾಗಿ ಇಡಲಾಗುವುದು. ದೂರಿನ ನಂತರ ಭ್ರಷ್ಟ ಅಧಿಕಾರಿ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸವನ್ನು ವೇದಿಕೆ ಮಾಡುತ್ತದೆ ಎಂದು ಹೇಳಿದರು.
ವೇದಿಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ವಿ.ಆರ್. ಮರಾಠೆ ಮಾತನಾಡಿ, ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದಲ್ಲಿ ಅಕ್ರಮ ಖಾತೆಗಳ ವಿರುದ್ಧ ವೇದಿಕೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ನಂತರದಲ್ಲಿ ವೇದಿಕೆಯು ಅದರ ಬೆನ್ನತ್ತಿ ಅಕ್ರಮಗಳ ಬಗ್ಗೆ ಮಾಹಿತಿ ಕಲೆಹಾಕಿತು. ಪರಿಣಾಮ ಈಚೆಗೆ ಪ್ರಭಾರ ಸಹಾಯಕ ಕಂದಾಯ ಅಧಿಕಾರಿ (ಯಲಚೇನಹಳ್ಳಿ) ನಾಗರಾಜು ಮತ್ತು ಕಂದಾಯ ಪರಿವೀಕ್ಷಕ (ಯಲಚೇನಹಳ್ಳಿ ಉಪವಿಭಾಗ) ಎನ್. ಮಂಜುನಾಥ್ ಅವರನ್ನು ಪಾಲಿಕೆ ಆಯುಕ್ತರು ಅಮಾನತುಗೊಳಿಸಿದರು ಎಂದು ಮಾಹಿತಿ ನೀಡಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಆಯುಕ್ತ, ಜಂಟಿ ಆಯುಕ್ತ ಮತ್ತು ಪ್ರಥಮದರ್ಜೆ ಸಹಾಯಕರನ್ನು ಅಮಾನತುಗೊಳಿಸಬೇಕು ಎಂದು ಇದೇ ವೇಳೆ ಮರಾಠೆ ಒತ್ತಾಯಿಸಿದರು. ಇದೇ ರೀತಿ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪರಿವೀಕ್ಷಕರಾಗಿದ್ದ ಎಂ. ಪ್ರಕಾಶ್ ಲಂಚ ಪಡೆಯುತ್ತಿದ್ದಾಗ ಕುಟುಕು ಕಾರ್ಯಾಚರಣೆ ನಡೆಸಿತು. ನಂತರ ಇಲಾಖೆ ಅಧಿಕಾರಿಗಳು ಪ್ರಕಾಶ್ ಅವರನ್ನು ಅಮಾನತುಗೊಳಿಸಿದರು ಎಂದು ವೇದಿಕೆಯ ತುಮಕೂರು ಘಟಕದ ಅಧ್ಯಕ್ಷ ರಘು ಜಾಣಗೆರೆ ತಿಳಿಸಿದರು.
* 88842 77730 ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಹಾಯವಾಣಿ ತೆರೆದಿದ್ದು, ಸರ್ಕಾರಿ ಸೇವೆಯಲ್ಲಿರುವ ಯಾವುದೇ ವ್ಯಕ್ತಿ ಲಂಚ ಪಡೆದರೆ, ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಕರೆ ಮಾಡಿ ದೂರು ನೀಡಬಹುದು.