ದಾವಣಗೆರೆ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮದುವೆ ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ (ಡಾನ್‌ಬಾಸ್ಕೋ ) ತಂಡ, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮಲೆಕ್ಕಾಧಿಕಾರಿ, ಶಾಲಾ ಮುಖ್ಯ ಶಿಕ್ಷಕಿ , ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಯಶಸ್ವಿಯಾಗಿದ್ದಾರೆ.
ಹರಿಹರ ತಾಲೂಕಿನ ಕೆ.ಎನ್. ಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತೆಯ ವಿವಾಹವು ಬಾಲಕಿಯ ಸೋದರ ಮಾವನೊಂದಿಗೆ ನಡೆಯಲಿದೆ ಎಂದು ಅಪರಿಚಿತರೊಬ್ಬರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದರು.
ಮಕ್ಕಳ ಸಹಾಯವಾಣಿಯ ಕೊಲ್ಯಾಬ್ ಡಾನ್‌ಬಾಸ್ಕೋದ ಸಂಯೋಜಕ ಟಿ.ಎಂ. ಕೊಟ್ರೇಶ್, ಕಾರ್ಯಕರ್ತ ಟಿ. ನಾಗರಾಜ್ ಬಾಲಕಿ ವಿದ್ಯಾಭ್ಯಾಸ ಮಾಡಿದ್ದ ಶಾಲೆಯಿಂದ ಜನ್ಮದಿನಾಂಕ ದೃಢೀಕರಣ ಪತ್ರ ಪಡೆದು ಪರಿಶೀಲಿಸಿದಾಗ ಬಾಲಕಿಗೆ 16 ವರ್ಷ 11 ತಿಂಗಳು ಎಂಬುದು ತಿಳಿದು ಬಂದಿತು.
ಕೂಡಲೇ ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡ ಕೆ.ಎನ್. ಹಳ್ಳಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಎ.ಆರ್. ಶಿಲ್ಪಾ, ಸದಸ್ಯರಾದ ಅನಿತಾ, ಮಂಜಮ್ಮ, ಲೆಕ್ಕಾಧಿಕಾರಿ ಆರ್. ಆನಂದತೀರ್ಥ, ಮುಖ್ಯ ಶಿಕ್ಷಕಿ ಗಿರಿಜಾಂಬ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಹಾದೇವಿ, ಅಂಗನವಾಡಿ ಕಾರ್ಯಕರ್ತೆಯರಾದ ಬಿ. ರತ್ನಮ್ಮ, ಸರೋಜಾ, ಆಶಾ ಕಾರ್ಯಕರ್ತೆಯರಾದ ನಿಂಗಮ್ಮ, ಎಂ.ಎನ್. ವಿಜಯಲಕ್ಷ್ಮೀ ಅವರೊಂದಿಗೆ ಬಾಲಕಿಯ ಮನೆಗೆ ಭೇಟಿ ನೀಡಿದರು.
ಬಾಲಕಿಯ ಪೋಷಕರಿಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹಾಗೂ ಶಿಕ್ಷೆ ಬಗ್ಗೆ ಅರಿವು ಮೂಡಿಸಿ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪಡೆಯುವ ಮೂಲಕ ಮುಂದೆ ನಡೆಯಲಿದ್ದ ಬಾಲ್ಯವಿವಾಹ ತಡೆಗಟ್ಟಿದ್ದಾರೆ.