ನವಲಗುಂದ: ತಹಶೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಶನಿವಾರ ತಾಲೂಕಿನ ಗೊಬ್ಬರಗುಂಪಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಯಿತು.
ತಹಶೀಲ್ದಾರ್ ಅನೀಲ ಪಾಟೀಲ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ವಿವರಿಸಿದರಲ್ಲದೇ ಅವರ ಮನವಿಗಳಿಗೆ ಸ್ಪಂದಿಸಿದರು.
ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ರೈತರ ಹೊಲಗಳಿಗೆ ರಸ್ತೆ ನಿರ್ಮಾಣ, ಗೊಬ್ಬರಗುಂಪಿ ಕ್ರಾಸ್‌ನಲ್ಲಿರುವ ಹೈಮಾಸ್ಕ್ ದೀಪಕ್ಕೆ ಚಾಲನೆ ನೀಡುವುದು, ರೇವಣಸಿದ್ದೇಶ್ವರ ಮಠದ ಹದ್ದುಬಸ್ತು ಗುರುತಿಸುವುದು, ರುದ್ರಭೂಮಿ ಬೇಡಿಕೆ, ಪಶು ಹಾಗೂ ಜಾನುವಾರುಗಳಿಗೆ ವೈದ್ಯರು ಮತ್ತು ಕೊಠಡಿ ಪೂರೈಸುವುದು, ಕಿರಿಯ ಆರೋಗ್ಯ ಸಹಾಯಕರ ಕೇಂದ್ರ ಸ್ಥಾಪನೆ, ಗ್ರಂಥಾಲಯ ನಿರ್ಮಾಣ, ಬಸ್ ನಿಲ್ದಾಣ ನಿರ್ಮಾಣ, ಜನತಾ ಪ್ಲಾಟ್‌ನಲ್ಲಿ ಸಿಸಿ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಕೆರೆ ಸುತ್ತಲೂ ತಂತಿಬೇಲಿ ಅಳವಡಿಸುವುದು, ವಿದ್ಯುತ್ ಕಂಬಗಳ ದುರಸ್ತಿ ಹಾಗೂ ಲೈನ್ ದುರಸ್ತಿ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ನೀಡಿ ಒತ್ತಾಯಿಸಿದರು.
ಅಧಿಕಾರಿಗಳು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಥಳದಲ್ಲಿ ಕೆಲವೊಂದು ಸಮಸ್ಯೆ ಇತ್ಯರ್ಥಪಡಿಸಿದರು. ಇನ್ನುಳಿದ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸಿ ಪರಿಹಾರ ನೀಡುವ ಭರವಸೆ ನೀಡಿದರು. ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ತಾಲೂಕಾಡಳಿತದ ಅಧಿಕಾರಿಗಳು ಇದ್ದರು.