ಚಿಕ್ಕಬಳ್ಳಾಪುರ : ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸರ್ಕಾರ ಬಡವರಿಗೆ ನೀಡುವ ಅಕ್ಕಿಯನ್ನು ಪಾಲಿಶ್ ಮಾಡಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಸಾರ್ವಜನಿಕರ ದೂರು ಕೊನೆಗೂ ನಿಜ ಸಾಬೀತು ಆಗಿದೆ ಸಾರ್ವಜನಿಕರಿಗೆ ವಿತರಿಸುವ ಅಕ್ಕಿಯನ್ನು ಪಾಲಿಶ್ ಮತ್ತು ನುಚ್ಚು ಆಗಿ ಪರಿವರ್ತಿಸಿ ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ನಗರದ ಕಂದವಾರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಗಿರಣಿ ಮೇಲೆ ದಾಳಿ ನಡೆಸಿ ಸುಮಾರು 4 ಲಕ್ಷ ರೂಗಳ ಮೌಲ್ಯದ ಅಕ್ಕಿ, ನುಚ್ಚು, ರಾಗಿ ಹಾಗೂ ವಿವಿಧ ಬ್ರಾಂಡ್‍ಗಳ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ನಗರದ ಕಂದವಾರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ವೇಣುಗೋಪಾಲ್ ಅವರ ಮಾಲೀಕತ್ವದ ಶ್ರೀ ಸಪ್ತಗಿರಿ ಗ್ರಾಮೋದಯ ಅಕ್ಕಿ ಗಿರಣಿಯ ಮೇಲೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಪಿ ಸವಿತಾ ಅವರ ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಆಹಾರ ಶಿರಸ್ತೇದಾರ್ ಬಿಜಿ ಗೌತಮ್, ಆಹಾರ ನಿರೀಕ್ಷಕ ರಘು ಅವರ ನೇತೃತ್ವದ ತಂಡ ದಾಳಿ ನಡೆಸಿ 7440 ಕೆಜಿ ಅಕ್ಕಿ ,28150 ಕೆಜಿ ನುಚ್ಚು,322 ಕೆಜಿ ರಾಗಿ ಹಾಗೂ ಪಾಲೀಶ್ ಮಾಡಿದ ಅಕ್ಕಿಯನ್ನು ತುಂಬಿಸಲು ತಂದಿದ್ದ ವಿವಿಧ ಬ್ರಾಂಡ್‍ಗಳ ಚೀಲಗಳನ್ನು ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಲಾಕ್ ಡೌನ್ ಅವಧಿಯಲ್ಲಿ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಸಂತಾನಾಭಿವೃದ್ಧಿ
ಭತ್ತದಿಂದ ಅಕ್ಕಿಯನ್ನು ಉತ್ಪಾದಿಸಿ ಮಾರಾಟ ಮಾಡುವ ಗಿರಣಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸರ್ಕಾರದಿಂದ ಬಡವರಿಗೆ ಬಿಡುಗಡೆ ಮಾಡಿರುವ ಅಕ್ಕಿಯನ್ನು ವಿವಿಧ ಮೂಲಗಳಿಂದ ಅಕ್ರಮವಾಗಿ ಖರೀದಿ ಮಾಡಿ ಗಿರಣಿಯಲ್ಲಿ ಪಾಲೀಶ್ ಮಾಡಿ ವಿವಿಧ ಬ್ರಾಂಡ್‍ನಲ್ಲಿ ಅಕ್ಕಿ ಚೀಲಗಳನ್ನು ತಯಾರಿಸಿ ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದ ಅಂಶ ಆಹಾರ ಇಲಾಖೆ ಅಧಿಕಾರಿಗಳಿಂದ ಬಹಿರಂಗಗೊಂಡಿದೆ ಈ ಸಂಬಂಧ ಆಹಾರ ಇಲಾಖೆ ಶಿರಸ್ತೇದಾರ್ ಅವರು ಸಪ್ತಗಿರಿ ಗ್ರಾಮೋದಯ ಅಕ್ಕಿ ಗಿರಣಿ ಮಾಲೀಕರ ಗೋಪಾಲ್ ಅವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಸೆಕ್ಷನ್ 3 ಮತ್ತು 6(ಎ) ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿ ಮತ್ತು ಕಾಳಸಂತೆಕೋರರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನಂದಿಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ನಂದಿಗಿರಿಧಾಮ ಪೊಲೀಸ್ ಠಾಣೆಯ ಪಿಎಸ್‍ಐ ಸುನೀಲ್ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಒಟ್ಟಾರೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಡವರಿಗೆ ಸಮರ್ಪಕವಾಗಿ ಪಡಿತರವನ್ನು ಹಂಚಿಕೆ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಪಿ ಸವಿತಾ ಅವರು ಕ್ರಮ ಕೈಗೊಂಡಿದ್ದಾರೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ದೂರು ಬಂದ ತಕ್ಷಣ ಕ್ರಮ ಜರುಗಿಸಿ ಕಾನೂನು ರೀತಿಯ ಕ್ರಮ ಕೈಗೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.