ಹೊಸಪೇಟೆ: ನಗರಸಭೆ ಆಸ್ತಿ ರಕ್ಷಣೆ, ಕುಡಿವ ನೀರಿನ ತೆರಿಗೆ ಹೆಚ್ಚಳ, ಆರೋಪ ಪಟ್ಟಿಯಲ್ಲಿರುವ ಸದಸ್ಯರ ಸದಸ್ಯತ್ಯ ರದ್ದತಿ, ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿನ ಕಾರ್ಯಕ್ರಮಗಳಿಗೆ ಹೆಚ್ಚಿನ ದರ ನಿಗದಿ, ಕಟ್ಟಡ ಪರವಾನಗಿ ಮಂಜೂರಾತಿಗೆ ದರ ಪರಿಷ್ಕರಣೆ, ಮೂರು ವರ್ಷದ ಹಳೆ ಬಿಲ್ ಗಳಿಗೆ ಮತ್ತು ವಿತರಿಸಲಾದ ಚಕ್‌ಗಳಿಗೂ ಸದಸ್ಯರ ಅನುಮೋದನೆ ಪಡೆಯುವುದು, ಅಜೆಂಡಾದಲ್ಲಿ ವಿಷಯ ತರಲು ಅರ್ಜಿ ನೀಡಿದರೂ ವಿಷಯ ಪರಿಗಣಿಸುತ್ತಿಲ್ಲ… ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುವ ಮೂಲಕ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ನಾಗಲಕ್ಷ್ಮಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅನೇಕ ಪ್ರಶ್ನೆಗಳಿಗೆ ಅಧಿಕಾರಿಗಳ ಮೌನವೇ ಉತ್ತರವಾಗಿತ್ತು. ಅನಂತಶಯನಗುಡಿಯಲ್ಲಿ ನಗರಸಭೆ ಆಸ್ತಿಯಲ್ಲಿದ್ದ ಸಾರ್ವಜನಿಕ ಗ್ರಂಥಾಲಯದ ಸ್ಥಳ
ಅತಿಕ್ರಮಗೊಂಡಿದೆ. ಆಸ್ತಿ ರಕ್ಷಣೆ ಮಾಡಬೇಕೆಂದು ಅರ್ಜಿ ಸಲ್ಲಿಸಿ ಮೂರು ವರ್ಷವಾದರೂ ಅಧಿಕಾರಿಗಳು ಸ್ಥಳ ಪರಿಶೀಲನೆಗೂ ಮುಂದಾಗಿಲ್ಲ ಎಂದು ಸದಸ್ಯ ಕುಲ್ಲಾಯಪ್ಪ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಇನ್ನುಳಿದ ಸದಸ್ಯರು ಧ್ವನಿಗೂಡಿಸಿ ಸಿಬ್ಬಂದಿಗಳ ವಿರುದ್ಧ ಹರಿಹಾಯ್ದರು. ನಾಳೆಯೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಎಇಇ ಮನ್ಸೂರ್ ಅಹ್ಮದ್ ಭರವಸೆ ನೀಡಿದರು.
ನಗರಸಭೆಗೆ ಆದಾಯ ಕುಂಠಿತಗೊಂಡಿದೆ. ಕುಡಿವ ನೀರಿನ ದರ ಹೆಚ್ಚಿಸಬೇಕೆಂದು ಪೌರಾಯುಕ್ತರು ಪ್ರಸ್ತಾಪಿಸುತ್ತಿದ್ದಂತೆ ಸದಸ್ಯ ಕೆ.ಗೌಸ್ ಮಾತನಾಡಿ, ಮೊದಲು ಜನರಿಗೆ ಕುಡಿವ ನೀರು ಸರಿಯಾಗಿ ಕೊಡಿ. ನೀರು ಸಿಗದಿದ್ದರೂ ಫಾರಂ-3ಗಾಗಿ ಜನರು ನೀರಿನ ಟ್ಯಾಕ್ಸ್ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ತಿಂಗಳಿಗೆ 200 ರೂ. ದರ ನಿಗದಿಗೊಳಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು. ಧ್ವನಿಗೂಡಿಸಿದ ಸದಸ್ಯರು, ಅನಧಿಕೃತವಾಗಿ ನೀರಿನ ಸಂಪರ್ಕಕ್ಕೆ ಕಡಿವಾಣ ಹಾಕಬೇಕು. ಬಿಲ್ ಕಲೆಕ್ಟರ್‌ಗಳ ಗಮನಕ್ಕೆ ಇಲ್ಲದೆ ಅನಧಿಕೃತ ಕನೆಕ್ಷನ್ ನಡೆಯುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಕರ ವಸೂಲಿ ಮಾಡಿದರೆ ನಗರಸಭೆಗೆ ಆದಾಯದ ಕೊರತೆ ಎದುರಾಗುವುದಿಲ್ಲ ಎಂದರು.
ನಗರದ ಮುನ್ಸಿಫಲ್ ಗ್ರೌಂಡ್‌ನಲ್ಲಿ ನಡೆಯುವ ವಾಣಿಜ್ಯ ಮೇಳಕ್ಕೆ 5000 ರೂ., ವಸ್ತು ಪ್ರದರ್ಶನಕ್ಕೆ 1000 ರೂ., ಟಿವಿ ಕಾರ್ಯಕ್ರಮಕ್ಕೆ 25000 ರೂ., ರಾಜಕೀಯ ಕಾರ್ಯಕ್ರಮಗಳಿಗೆ 25000 ರೂ. ನಿಗದಿಪಡಿಸಬಹುದು ಎಂದು ಸದಸ್ಯರು ಸಲಹೆ ನೀಡಿದರು.
ನಗರದಲ್ಲಿನ ಕಟ್ಟಡ ಪರವಾನಗಿ ಪಡೆಯುವ ದರ ಅತಿ ಕಡಿಮೆಯಾಗಿದೆ. ವಸತಿಗಾಗಿ ಪ್ರತಿ ಚ.ಅಡಿಗೆ 2 ರೂ.ರ ಬದಲಾಗಿ 4 ರೂ., ಕೈಗಾರಿಕೆಗೆ
2 ರೂ. ಬದಲಾಗಿ 5 ರೂ. ಮತ್ತು ವಾಣಿಜ್ಯಕ್ಕೆ 2 ರೂ. ಬದಲಾಗಿ 6 ರೂ. ನಿಗದಿಗೊಳಿಸಲು ಚರ್ಚೆ ನಡೆಯಿತು. ನಗರಸಭೆ ಉಪಾಧ್ಯಕ್ಷೆ ಸುಮಂಗಳ
ಸೇರಿದಂತೆ ಸದಸ್ಯರು ಇದ್ದರು.