Advertisement

‘ಅಧಿಕಾರಿಗಳು ಜನಪರವಾಗಿ ಕೆಲಸ ನಿರ್ವಹಿಸಿ’

10:43 AM Sep 16, 2018 | Team Udayavani |

ಬಂಟ್ವಾಳ: ಭೂ ಪರಿವರ್ತನೆ ಮತ್ತು ದಾಖಲೀಕರಣ, ಇತರ ಯಾವುದೇ ವಿಷಯಗಳಿಗೆ ಸಂಬಂಧಿಸಿ ಜನರಿಗೆ ಸಮಸ್ಯೆ ಆಗದಂತೆ ಕೆಲಸ ನಿರ್ವಹಿಸಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ. ಅವರು ಸೆ. 14ರಂದು ಸಂಜೆ ಬಂಟ್ವಾಳ ತಾ.ಪಂ. ಸಭಾಂಗಣದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾ| ವ್ಯಾಪ್ತಿಯ 72 ಫಲಾನುಭವಿಗಳಿಗೆ 5,88,625 ರೂ. ವಿವಿಧ ಯೋಜನೆ ಚೆಕ್‌ ವಿತರಣೆ, 94 ಸಿ ಮತ್ತು ಸಿಸಿ 59 ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು.

Advertisement

ಹಕ್ಕುಪತ್ರ ವಿತರಣೆಗೆ ಫಲಾನುಭವಿಗಳ ಆಯ್ಕೆಯಲ್ಲಿ ಕೆಲವರಿಗೆ ಕೊಟ್ಟು, ಇನ್ನೊಬ್ಬರಿಗೆ ಕೊಡದಿರುವುದರಿಂದ ಬೇರೆ ಅರ್ಥ ಕಲ್ಪಿಸುವುದಕ್ಕೆ ಅವಕಾಶ ಆಗುತ್ತದೆ. ಇದನ್ನು ಅಧಿಕಾರಿಗಳು ಗಮನದಲ್ಲಿಟ್ಟು ಕೆಲಸ ಮಾಡಬೇಕು. ಬಾಪೂಜಿ ಸೇವಾ ಕೇಂದ್ರಗಳಿದ್ದರೂ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲಿ ಹಲವು ಸಮಸ್ಯೆಗಳಿವೆ ಎಂದು ತುಂಬೆ ಗ್ರಾಮಸ್ಥರು ದೂರಿದಾಗ, ಈ ಬಗ್ಗೆ ಸಚಿವರು ಅಧಿಕಾರಿಗಳಲ್ಲಿ ಸಮಸ್ಯೆ ಕುರಿತು ಪ್ರಶ್ನಿಸಿದರು. ತ್ವರಿತ ಸೇವೆಗೋಸ್ಕರ ಬಾಪೂಜಿ ಸೇವಾ ಕೇಂದ್ರ ಸ್ಥಾಪಿಸಿದ್ದಾಗಿ ವಿವರಿಸಿದರು.

ಲೋಪ: ಅಧಿಕಾರಿಗಳೇ ಹೊಣೆ
ಸೆ. 20ರಂದು ಜಿಲ್ಲಾ ಮಟ್ಟದ ಕೆಡಿಪಿ ಸಭೆ ಮಂಗಳೂರಲ್ಲಿ ನಡೆಯಲಿದೆ. ಅಹವಾಲುಗಳು ಬಾರದಂತೆ ಗಮನಹರಿಸಿ, ಅಂಗನವಾಡಿ ವ್ಯಾಪ್ತಿಯಲ್ಲಿ ಇರುವ ಫಲಾನುಭವಿಗಳನ್ನು ಗುರುತಿಸಿ, ಮಾಹಿತಿ ಸಂಗ್ರಹಿಸಿ ಸರಕಾರದ ಯೋಜನೆಗಳನ್ನು ಸರಿಯಾಗಿ ಮುಟ್ಟಿಸುವಲ್ಲಿ ಪ್ರಯತ್ನಿಸಿ. ಇದರಲ್ಲಿ ಲೋಪ ಉಂಟಾದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ರವೀಂದ್ರ ಕಂಬಳಿ, ಮಂಜುಳಾ ಮಾವೆ, ಮಮತಾ ಡಿ.ಎಸ್‌. ಗಟ್ಟಿ, ತಾ.ಪಂ. ಅಧ್ಯಕ್ಷ ಚಂದ್ರ ಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ತಹಶೀಲ್ದಾರ್‌ ಪುರಂದರ ಹೆಗ್ಡೆ, ಇಒ ರಾಜಣ್ಣ, ಮಂಗಳೂರು ತಾ.ಪಂ. ಅಧ್ಯಕ್ಷ ಯು.ಕೆ. ಮೋನು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಫಲಾನು ಭವಿಗಳ ಪಟ್ಟಿ ವಾಚಿಸಿದರು.

ಸವಲತ್ತುಗಳು ಸಿಗುವಂತಾಗಲಿ
ಅಧಿಕಾರಿ ವರ್ಗ ಜನಪ್ರತಿನಿಧಿಗಳ ಜತೆ ಹೊಂದಾಣಿಕೆಯಿಂದ ಕೆಲಸ ಮಾಡಿ. ಆ ಮೂಲಕ ಜನರಿಗೆ ಸಿಗುವ ಸವಲತ್ತುಗಳು ಸಮಸ್ಯೆ ಇಲ್ಲದೆ ಸಿಗುವಂತೆ ಪ್ರಯತ್ನ ನಡೆಸಿ.
ಯು.ಟಿ. ಖಾದರ್‌
ಜಿಲ್ಲಾ ಉಸ್ತುವಾರಿ ಸಚಿವರು

Advertisement
Advertisement

Udayavani is now on Telegram. Click here to join our channel and stay updated with the latest news.

Next