ಮಾನ್ವಿ: ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ಸರ್ಕಾರಗಳು ಮಾಡದೇ ಇರುವಂತಹ ಕೆಲಸವನ್ನು ಖಾಸಗಿ ಸಂಸ್ಥೆಗಳು ಮಾಡುತ್ತಿವೆ ಎಂದು ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಹೇಳಿದರು.
ತಾಲೂಕಿನ ಬ್ಯಾಗವಾಟ ಗ್ರಾಮದ ಶ್ರೀ ಮಲ್ಲಿಕಾರ್ಜುನ ರೂರಲ್ ಎಜುಕೇಷನ್ ಮತ್ತು ಡೆವಲಪಮೆಂಟ್ ಚಾರಿಟೇಬಲ್ ಟ್ರಸ್ಟ್‌ನ ಸಮತಾ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ 8ನೇ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾನಡಿದರು.
ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ಕಷ್ಟಕರವಾಗಿತ್ತು. ಈಗ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ಮುಂದುವರಿದ ಈ ಜಗತ್ತಿನಲ್ಲಿ ಶಿಕ್ಷಣ ಅತ್ಯಮೂಲ್ಯವಾಗಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳಲ್ಲಿ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸುವ ಹಾಗೂ ಸಾಂಸ್ಕೃತಿಕ ಮನೋಭಾವನೆ ಮೂಡಬೇಕಾದರೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಹೇಳಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಶರ್ಫುದ್ದೀನ್ ಪೋತ್ನಾಳ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಾಲೆ ನಡೆಸುವುದು ಬಹಳ ಕಷ್ಟಕರವಾಗಿದೆ. ಅದರಲ್ಲಿಯೂ ಖಾಸಗಿ ಶಾಲೆಗಳು ಉತ್ತಮ ಶಿಕ್ಷಣ ನೀಡುವ ಸಂಸ್ಥೆಗಳಾಗಿವೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಬಸವರಾಜ ಹತ್ತಿಗುಡ್ಡ ಮಾತನಾಡಿ, ನಮ್ಮ ಶಾಲೆಯಲ್ಲಿ ಅತ್ಯಂತ ಕಡಿಮೆ ಶುಲ್ಕ ತೆಗೆದುಕೊಂಡು ಅದರಲ್ಲಿ ಎಲ್ಲ ರೀತಿಯ ಶಿಕ್ಷಣ ಕಲಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಎಲ್ಲ ಪಾಲಕರು ತಮ್ಮ ಮಕ್ಕಳನ್ನು ನಮ್ಮ ಸಂಸ್ಥೆಗೆ ಸೇರಿಸುವ ಮೂಲಕ ಇಂತಹ ಸೌಲಭ್ಯ ಪಡೆಯಬೇಕು ಎಂದು ಹೇಳಿದರು.
ಕರೆಗುಡ್ಡ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಿಂಧನೂರು ತಾಲೂಕು ವೈದ್ಯಾಧಿಕಾರಿ ನಾಗರಾಜ ಪಾಟೀಲ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ರಾಜು ತಾಳಿಕೋಟೆ, ಗ್ರಾಪಂ ಅಧ್ಯಕ್ಷ ಮಹೇಶ್ವರಿ ಕೊಟ್ರಯ್ಯಸ್ವಾಮಿ, ಶಿಕ್ಷಕರಾದ ನಾಗೇಂದ್ರಪ್ಪ, ಹನುಮಂತರಾವ್ ಕುಲಕರ್ಣಿ, ಶಿವನಗೌಡ ಇತರರು ಉಪಸ್ಥಿತರಿದ್ದರು.