Advertisement
ರಾಜಧಾನಿ ಪ್ರಮುಖ ರಸ್ತೆಗಳ ಫುಟ್‌ಪಾತ್ ಮೇಲೆ ಪಾದಚಾರಿಗಳು ಸುಗಮ ಸಂಚಾರ ಮಾಡಲಾಗದಷ್ಟು ಓಎಫ್ ಸಿ ಕೇಬಲ್‌ಗಳು ಸಮಸ್ಯೆ ಉಂಟು ಮಾಡುತ್ತಿವೆ. ಕೆಲವು ಪ್ರದೇಶಗಳಲ್ಲಿ ಪಾದಚಾರಿ ರಸ್ತೆ ಮೇಲೆ ಅಲ್ಲಲ್ಲಿ ಸುತ್ತಿಟ್ಟಿರುವ, ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವ ಕೇಬಲ್‌ಗಳು ಓಡಾಟಕ್ಕೆ ತೊಂದರೆ ಉಂಟು ಮಾಡಿವೆ.
Related Articles
Advertisement
ಪಾಲಿಕೆ ನಿಯಂತ್ರಣವೇ ಇಲ್ಲವಾಗಿದೆ:
ಪಾಲಿಕೆ ವ್ಯಾಪ್ತಿಯಲ್ಲಿ ಕೊನೆ ಮೈಲಿ ಸಂಪರ್ಕಕ್ಕೆ ಅನಧಿಕೃತವಾಗಿ ಅಳವಡಿಸಿರುವ ಒಎಫ್‌ಸಿ ಪೋಲ್‌ಗಳನ್ನು ಅಧಿಕೃತಗೊಳಿಸುವ ಬಗ್ಗೆ ಬಿಬಿಎಂಪಿ ಹೆಜ್ಜೆಯಿರಿಸಿತ್ತು. ಒಎಫ್‌ಸಿ ಕೇಬಲ್ ಸೇವಾ ಸಂಸ್ಥೆಯಿಂದ ಪ್ರತಿ ಪೋಲ್‌ಗೆ 54,35,39 ರೂ. ಶುಲ್ಕ ಪಾವತಿಸಿಕೊಂಡು ಅನಧಿಕೃತವಾಗಿ ಹಾಕಿರುವ ಪೋಲ್‌ಗಳನ್ನು ಅಧಿಕೃತಗೊಳಿಸಲು ತೀರ್ಮಾನಿಸಿತ್ತು. ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಮತ್ತು ಡಿಡಿಯನ್ನು ಪಾವತಿಸಿ ಅಧಿಕೃತಗೊಳಿಸಿ ಕೊಳ್ಳಲು ಕಾಲಾವಕಾಶ ನೀಡಲಾಗಿತ್ತು. ಆದರೆ ಈ ಪ್ರಕ್ರಿಯೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ನಿಗದಿತ ರಸ್ತೆಗಳಿಗೆ ಓಎಫ್ ಸಿ ಕೇಬಲ್‌ಗಳನ್ನು ಅಳವಡಿಕೆ ಮಾಡಲು ಬಿಬಿಎಂಪಿಯ ಒಎಫ್ಸಿ ವಿಭಾಗ ಅವಕಾಶ ನೀಡುತ್ತದೆ. ಆದರೆ ಟೆಲಿಕಾಂ ಕಂಪನಿಗಳಿಗೆ ಒಎಫ್ಸಿ ಕೇಬಲ್ ಅಳವಡಿಸುವ ಸೇವಾ ಕಂಪನಿಗಳು ಅನುಮತಿ ಪಡೆದುದಕ್ಕಿಂತಲೂ ಹೆಚ್ಚಾಗಿ ಗುಂಡಿ ತೋಡುವ, ಹೆಚ್ಚುವರಿ ಕೇಬಲ್‌ಗಳನ್ನು ಹಾಕಿ ಬಿಬಿಎಂಪಿಗೆ ನೂರಾರು ಕೋಟಿ ರೂ. ನೆಲ ಬಾಡಿಗೆ ಶುಲ್ಕ ಕಟ್ಟುವುದರಿಂದ ತಪ್ಪಿಸಿಕೊಳ್ಳುತ್ತಿವೆ. ಪಾಲಿಕೆಗೆ ಒಎಫ್ಸಿ ಕೇಬಲ್‌ಗಳ ಮೇಲಿನ ನಿಯಂತ್ರಣ ತಪ್ಪಿ ಹೋಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಪಿ.ಆರ್.ರಮೇಶ್ ದೂರುತ್ತಾರೆ.
3 ವರ್ಷ ರಸ್ತೆ ಅಗೆಯುವಂತಿಲ್ಲ
ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣ ಮಾಡಿ 3 ವರ್ಷದ ತನಕ ರಸ್ತೆಗಳನ್ನು ಅಗೆಯುವುದಕ್ಕೆ ಅವಕಾಶವಿಲ್ಲ. ಒಂದೊಮ್ಮೆ ಓಎಫ್ ಸಿ ಕೇಬಲ್ ಅಳವಡಿಸುವ ಸಂಸ್ಥೆ ಡಾಂಬರ್ ಹಾಕುವ ಮುನ್ನ ಪೂರ್ವಾನುಮತಿ ಪಡೆದಿದ್ದರೂ ಡಾಂಬರೀಕರಣ ನಂತರ ರಸ್ತೆ ಕತ್ತರಿಸಲು ನೀಡಿರುವ ಅನುಮತಿ ಅಸಿಂಧುವಾಗುತ್ತದೆ. ಈಗಲೂ ನಗರದ ಹಲವೆಡೆ ಹೊಸದಾಗಿ ಡಾಂಬರ್ ಹಾಕಿದ ನಂತರವೂ ಕೇಬಲ್ ಆಳವಡಿಸುವ ಪ್ರವೃತ್ತಿ ಇದೆ. ಆಪ್ಟಿಕಲ್ ಫೈಬರ್ ಕೇಬಲ್ ಹಾಕಲು ಎಚ್‌ಡಿಡಿ ಯಂತ್ರ ಬಳಸಿ ರಸ್ತೆ ಕೊರೆಯಲಾಗುತ್ತದೆ. ಹೀಗೆ ತೋಡುವ ಗುಂಡಿಗಳನ್ನು ಅದೇ ದಿನ ಮುಚ್ಚಿ ಸರಿಪಡಿಸಬೇಕು ಎಂದು ಬಿಬಿಎಂಪಿ ನಿಯಮಾವಳಿಯಲ್ಲಿದೆ. ಆದರೆ ಈ ತನಕ ನಿಯಮಾವಳಿ ಸೂಕ್ತ ರೀತಿಯಲ್ಲಿ ಪಾಲನೆ ಆಗುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಓಎಫ್ ಸಿ ಕೇಬಲ್‌ಗಳ ಬಗ್ಗೆ ಈ ಹಿಂದೆ ಪಾಲಿಕೆ ಸದಸ್ಯನಾಗಿದ್ದಾಗಲೂ ಧ್ವನಿ ಎತ್ತಿದ್ದೆ. ಆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪಾಲಿಕೆ ಅಧಿಕಾರಿಗಳು ಅನಧಿಕೃತ ಕೇಬಲ್‌ಗಳ ತೆರವಿಗೆ ಮುಂದಾಗಿದ್ದರು. ಮತ್ತೆ ನಗರದಲ್ಲಿ ಓಎಫ್ ಸಿ ಕೇಬಲ್‌ಗಳ ಹಾವಳಿ ಹೆಚ್ಚಾಗಿದೆ. ಪಾಲಿಕೆಗೆ ಸುಳ್ಳು ಲೆಕ್ಕ ತೋರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಪಾಲಿಕೆ ಕಡಿವಾಣ ಹಾಕಬೇಕು. ● ಪಿ.ಆರ್.ರಮೇಶ್, ವಿಧಾನ ಪರಿಷತ್ ಸದಸ್ಯ
● ದೇವೇಶ ಸೂರಗುಪ್ಪ