Advertisement

ನ. 21-24: ಧರ್ಮಸ್ಥಳದಲ್ಲಿ  ಅಂತಾರಾಷ್ಟ್ರೀಯ ಯೋಗೋತ್ಸವ

12:17 PM Jun 22, 2017 | Team Udayavani |

ಬೆಳ್ತಂಗಡಿ: ಈ ವರ್ಷದ ನ. 21ರಿಂದ 24ರವರೆಗೆ ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗೋತ್ಸವ ಆಯೋಜಿಸಲು ಉದ್ದೇಶಿಸಿದ್ದು ಒಂದು ವರ್ಷದಿಂದ ಭರದ ಸಿದ್ಧತೆಗಳು ನಡೆಯುತ್ತಿವೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಬುಧವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ವತಿಯಿಂದ ನಡೆದ 3ನೇ ವಿಶ್ವಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗದಿಂದ ವಿಶ್ವ ಶಾಂತಿ, ಭಾತೃತ್ವ ಯೋಗದ ಮೂಲ ಗುರು ಶಿವನಿಂದ ಪತಂಜಲಿ ಮೂಲಕ ಯೋಗ ಸೂತ್ರಗಳು ರೂಪಿಸಲ್ಪಟ್ಟಿವೆ. ಯೋಗವು ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ನಮ್ಮ ಆಯುಷ್ಯದ ಪ್ರತಿಯೊಂದು ಕ್ಷಣವನ್ನೂ ಸದುಪ ಯೋಗ ಮಾಡಬೇಕಾದರೆ ಆರೋಗ್ಯ ಪೂರ್ಣ ದೇಹ ಮತ್ತು ಮನಸ್ಸು ಇರಬೇಕು. ಇಂದು ಯಾವುದನ್ನು ಬೇಕಾದರೂ ಆನ್‌ಲೈನ್‌ ಮೂಲಕ ಖರೀದಿಸ ಬಹುದು. ಆದರೆ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ನಿತ್ಯವೂ ಯೋಗಾ ಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ಇಂದ್ರಿಯಗಳ ನಿಯಂತ್ರಣವೂ ಆಗುತ್ತದೆ. ರಕ್ತ ದೊತ್ತಡ, ಮಧುಮೇಹದಿಂದ ಮುಕ್ತಿ ಹೊಂದಬಹುದು. ಪ್ರಧಾನಿಯವರು ಈ ಬಗ್ಗೆ ಜಾಗೃತಿಗೆ ಉತ್ಸುಕರಾಗಿದ್ದಾರೆ ಎಂದರು.

ಯೋಗದಿಂದ ಆರೋಗ್ಯ
ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್‌ ಭಟ್‌, ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಆರೋಗ್ಯ ರಕ್ಷಣೆಗೆ ಯೋಗ ಅಗತ್ಯ. ಯೋಗದಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. ಎಲ್ಲರೂ ಶ್ರದ್ಧೆಯಿಂದ ನಿತ್ಯವೂ ಯೋಗಾಭ್ಯಾಸ ಮಾಡಬೇಕು ಎಂದು ಹೇಳಿದರು.

ಉತ್ತಮ ಜ್ಞಾನ, ಪ್ರೀತಿ-ವಿಶ್ವಾಸ ಮತ್ತು ನಿಸ್ಪೃಹ ಸೇವಾ ಮನೋಭಾವ ಹೊಂದಿದವರು ಪರಿಶುದ್ಧರಾಗುತ್ತಾರೆ. ಇಂದು ಆಧುನಿಕ ಜೀವನ ಶೈಲಿ, ಆಹಾರ ಸೇವನೆ ಹಾಗೂ ಸದಾ ಕೆಲಸದ ಒತ್ತಡದಿಂದಾಗಿ ಅನಾರೋಗ್ಯ ಎಲ್ಲರನ್ನೂ ಕಾಡುತ್ತಿದೆ. ಎಲ್ಲರೂ ನಿತ್ಯವೂ ಯೋಗಾಭ್ಯಾಸ ಮಾಡಿದಲ್ಲಿ ಕೆಲಸದಲ್ಲಿ ಕೌಶಲ ಸಾಧಿಸುವುದರೊಂದಿಗೆ ಆರೋಗ್ಯ ಭಾಗ್ಯ ಹೊಂದಬಹುದು ಎಂದರು.

ಕೆನರಾ ಬ್ಯಾಂಕಿನ ಮಹಾ ಪ್ರಬಂಧಕ ರವೀಂದ್ರ ಭಂಡಾರಿ, ತಾನು ನಿತ್ಯವೂ ಯೋಗಾಭ್ಯಾಸ ಮಾಡುತ್ತಿದ್ದು ಆರೋಗ್ಯವಾಗಿದ್ದೇನೆ. ಕೆಲಸದ ಒತ್ತಡ ನಿವಾರಣೆಯಾಗಿ ಧನಾತ್ಮಕ ಚಿಂತನೆ ಬೆಳೆಯುತ್ತದೆ ಎಂದರು.

Advertisement

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಬಿ. ವಸಂತ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ನಿರ್ದೇಶಕ ಅರುಣ್‌ ಪೂಜಾರ್‌ ಮಾತನಾಡಿದರು.

ಹೇಮಾವತಿ ವಿ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಯೋಗ ನಿರ್ದೇಶಕ ಡಾ| ಐ. ಶಶಿಕಾಂತ್‌ ಜೈನ್‌ ಉಪಸ್ಥಿತರಿದ್ದರು. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next