ಮುಂಬಯಿ: ನಾವು ಎಷ್ಟೇ ಮುಂದುವರಿದರೂ ನಮ್ಮ ಸನಾತನ ಪರಂಪರೆಯನ್ನು ಮರೆಯಬಾರದು. ಆಧುನಿಕ ಬದುಕಿಗೆ ಅಗತ್ಯವಾದ ಅಂಶಗಳು ಅದರಲ್ಲಿ ಇವೆ. ಸನಾತನ ಪರಂಪರೆಯನ್ನು ಮರೆತರೆ ನಮ್ಮ ಬದುಕು ಶೂನ್ಯವಾಗಿರುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಜು. 31ರಂದು ಥಾಣೆ ಪಶ್ಚಿಮದ ಹೊಟೇಲ್ ವುಡ್‌ಲ್ಯಾಂಡ್ ರಿಟ್ರೀಟ್ ಸಭಾಗೃಹದಲ್ಲಿ ಥಾಣೆ ಪರಿಸರದ ಗುರು ಭಕ್ತರು ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಮಗೆ ಆಹಾರ ಸೇವಿಸುವ ಹಕ್ಕಿದೆ. ಆದರೆ ಅದನ್ನು ದುರುಪಯೋಗ ಪಡಿಸುವ ಹಕ್ಕಿಲ್ಲ. ಇತ್ತೀಚೆಗೆ ನಾವು ಅಗತ್ಯಕ್ಕಿಂತ ಹೆಚ್ಚು ದುರುಪಯೋಗ ಮಾಡುತ್ತಿದ್ದೇವೆ. ಆಹಾರದಲ್ಲಿ ಎಲ್ಲರಿಗೂ ಹಕ್ಕು ಇದೆ. ಎಷ್ಟೋ ಜನ ಒಂದು ಹೊತ್ತಿನ ಆಹಾರಕ್ಕಾಗಿ ಕಷ್ಟಪಡುತ್ತಿದ್ದಾರೆ. ಆದ್ದರಿಂದ ನಾವು ಆಹಾರವನ್ನು ದುರುಪಯೋಗಪಡಿಸದೆ ಎಷ್ಟು ಬೇಕೋ ಅಷ್ಟನ್ನೇ ಉಪಯೋಗಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳ ಬೇಕು. ನಾವು ಬದುಕಬೇಕು. ಇತರರನ್ನು ಬದುಕಲು ಬಿಡಬೇಕು. ಇದುವೇ ಶ್ರೇಷ್ಠವಾದುದು. ನಾವು ಇಲ್ಲಿ ಏನನ್ನು ಗಳಿಸುವುದರಲ್ಲೂ ಸಂಗ್ರಹಿಸುವುದರಲ್ಲೂ ಧರ್ಮ ಇರಬೇಕು. ಇವತ್ತು ಒಳ್ಳೆಯದು ಮಾಡಿದರೆ, ನಾಳೆ ಅದರ ಪ್ರತಿಫಲ ದೊರೆಯುತ್ತದೆ. ನಾವು ಬರುವಾಗ ಯಾವುದನ್ನೂ ತರಲಿಲ್ಲ. ಎಲ್ಲವೂ ಇಲ್ಲಿಂದಲೇ ಸಿಕ್ಕಿದೆ. ಆದ್ದರಿಂದ ನಾವು ಸಂಗ್ರಹಿಸಿದ ಸಂಪತ್ತಿನಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಿರಬೇಕು. ನಗುನಗುತ್ತಾ ಜೀವನವನ್ನು ಸಾಗಿಸುವವನು ಸದಾ ಸಂತೋಷವಾಗಿರುತ್ತಾನೆ ಎಂದು ಸ್ವಾಮೀಜಿ ಅವರು ನುಡಿದರು.
ಭಜನೆಯ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಸಾಧ್ವಿ ಮಾತಾನಂದಮಯಿ ಅವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೀಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುದೇವ ಸೇವಾ ಬಳಗದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಎಲ್. ಶೆಟ್ಟಿ, ಉಪಾಧ್ಯಕ್ಷರಾದ ಬೊಳ್ನಾಡುಗುತ್ತು ಚಂದ್ರಹಾಸ ರೈ, ದಾಮೋದರ ಶೆಟ್ಟಿ, ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ವಾಮಯ್ಯ ಶೆಟ್ಟಿ, ಥಾಣೆಯ ಸೇವಾ ಬಳಗದ ಸಕ್ರಿಯ ಕಾರ್ಯಕರ್ತ ಗುಣಪಾಲ್ ಎಸ್. ಶೆಟ್ಟಿ, ಮೋಹನ್ ಹೆಗ್ಡೆ, ಮನೋಜ್ ಕುಮಾರ್ ಹೆಗ್ಡೆ, ಜಯರಾಮ ಟಿ. ಸಂತ, ಶೇಖರ್ ಡಿ. ಶೆಟ್ಟಿ, ಸುರೇಶ್ ಕೆ. ಶೆಟ್ಟಿ, ಗಂಗಾಧರ ಶೆಟ್ಟಿ, ಶೇಖರ್ ಶೆಟ್ಟಿ, ಮರಾಠ ಸುರೇಶ್ ಶೆಟ್ಟಿ, ಹರೀಶ್ ಉದ್ಯಾವರ, ರಾಜೇಶ್ ಆಮರ್ ಪ್ಯಾಲೇಸ್, ದಾಮೋದರ, ಧರ್ಮೇಂದ್ರ, ದೇವದಾಸ್ ಉಚ್ಚಿಲ್, ಸುಹಾಸಿನಿ ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವೀರೇಂದ್ರ ಶೆಟ್ಟಿ ದಂಪತಿ ಶ್ರೀಗಳ ಪಾದುಕಾಪೂಜೆ ನೆರವೇರಿಸಿದರು. ಶ್ರೇಯಾ ಶೆಟ್ಟಿ, ಕಾರ್ತಿಕ್ ಶೆಟ್ಟಿ, ವೀರೇಂದ್ರ ಶೆಟ್ಟಿ, ಸಚಿನ್ ಶೆಟ್ಟಿ ಅವರು ಶ್ರೀಗಳಿಗೆ ಫಲಪುಷ್ಪವನ್ನಿತ್ತು ಗೌರವಿಸಿ ದರು. ಶರಣ್ ಶೆಟ್ಟಿ ಮತ್ತು ಶಾಶ್ವತಿ ಶೆಟ್ಟಿ ಪ್ರಾರ್ಥನೆಗೈದರು. ಶ್ರೀಗಳು ಭಕ್ತಾದಿಗಳನ್ನು ಫಲಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು. ಗುರುಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಧರ್ಮದಿಂದ ನಡೆಯಿರಿ
ಜೀವನದಲ್ಲಿ ಬರುವ ಕಷ್ಟಗಳಿಗೆ ಧೃತಿಗೆಡದೆ ಅದು ಬದುಕಿನ ಮೆಟ್ಟಿಲು ಎಂದು ತಿಳಿದು ಮುಂದೆ ಸಾಗಬೇಕು. ಆಗ ನಮಗೆ ಯಶಸ್ಸಿನ ಜೀವನ ನಡೆಸಲು ಸಾಧ್ಯವಾಗುತ್ತದೆ. ಧರ್ಮಪ್ರಜ್ಞೆಯು ಸದಾ ನಮ್ಮಲ್ಲಿ ಜಾಗೃತವಾಗಿರಬೇಕು. ಧರ್ಮದಿಂದ ನಡೆದರೆ ಪ್ರಪಂಚದ ಯಾವುದೇ ಶಕ್ತಿ ನಮ್ಮನ್ನು ಮಣಿಸಲು ಸಾಧ್ಯವಿಲ್ಲ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ