ನಬರಂಗಪುರ (ಒಡಿಶಾ): ಒಡಿಶಾದ ಕೊರಾಪುಟ್ ಜಿಲ್ಲೆಯ 35 ವರ್ಷದ ವ್ಯಕ್ತಿಯೊಬ್ಬರು ನೆರೆಯ ಆಂಧ್ರಪ್ರದೇಶದ ಆಸ್ಪತ್ರೆಯಿಂದ ಹಿಂತಿರುಗುವಾಗ ಆಟೋ ರಿಕ್ಷಾದಲ್ಲಿ ಸಾವನ್ನಪ್ಪಿದ ಪತ್ನಿಯ ಶವವನ್ನು ಭುಜದ ಮೇಲೆ ಹೊತ್ತು ಹಲವಾರು ಕಿಲೋಮೀಟರ್ ದೂರ ನಡೆದ ಪ್ರಸಂಗ ನಡೆದಿದೆ.
ಮೃತಪಟ್ಟ ಮಹಿಳೆಯನ್ನು 30 ವರ್ಷದ ಈಡೆ ಗುರು ಎಂದು ಗುರುತಿಸಲಾಗಿದೆ. 35 ವರ್ಷದ ಸಮುಲು ಪಾಂಗಿ ಎಂಬಾತ ಪತ್ನಿಯ ಶವವನ್ನು ಹೊತ್ತುಕೊಂಡು ಹೋಗುವುದನ್ನು ಕಂಡ ಪೊಲೀಸರೊಬ್ಬರು ಅವರಿಗೆ ಬಳಿಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಸಂಗಿವಲಸದಲ್ಲಿರುವ ಆಸ್ಪತ್ರೆಗೆ ತನ್ನ ಅಸ್ವಸ್ಥ ಪತ್ನಿಯನ್ನು ಪಾಂಗಿ ದಾಖಲಿಸಿದ್ದರು. ಆದರೆ, ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದ್ದು, ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಪಾಂಗಿ ಅವರು ತಮ್ಮ ಹಳ್ಳಿಗೆ ಮರಳಲು ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದರು ಆದರೆ ವಿಜಯನಗರದ ಬಳಿ ರಸ್ತೆ ಮಧ್ಯ ಪತ್ನಿ ನಿಧನರಾದರು. ಹೀಗಾಗಿ ಆಟೋ ಚಾಲಕ ಪ್ರಯಾಣ ಮುಂದುವರಿಸಲು ನಿರಾಕರಿಸಿ ಅವರನ್ನು ಚೆಲ್ಲೂರು ರಿಂಗ್ ರಸ್ತೆಯಲ್ಲಿ ಇಳಿಸಿ ಸ್ಥಳದಿಂದ ಹೊರಟಿದ್ದಾನೆ.
ಇದನ್ನೂ ಓದಿ:ವಿಶ್ವದ ಅತೀ ಎತ್ತರದ ಮರಗೆಣಸಿನ ಗಿಡ: ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು
ಬೇರೆ ದಾರಿ ಕಾಣದೆ ಪಾಂಗಿ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಸುಮಾರು 80 ಕಿಲೋಮೀಟರ್ ದೂರದ ಮನೆಯತ್ತ ನಡೆಯತೊಡಗಿದ್ದಾರೆ. ಸ್ವಲ್ಪ ಸಮಯದ ನಂತರ, ಸ್ಥಳೀಯರಿಂದ ಮಾಹಿತಿ ಪಡೆದ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ವಿ.ತಿರುಪತಿ ರಾವ್ ಮತ್ತು ಗಂಟ್ಯಾಡ ಸಬ್ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಅವರನ್ನು ತಡೆದಿದ್ದಾರೆ.
ಆರಂಭದಲ್ಲಿ ಆಂಧ್ರ ಪ್ರದೇಶದ ಪೊಲೀಸರಿಗೆ ಭಾಷೆಯ ಸಮಸ್ಯೆಯಿಂದ ಪಾಂಗಿ ಏನು ಹೇಳುತ್ತಿದ್ದನೆಂದು ಅಳೆಯಲು ಕಷ್ಟವಾಗುತ್ತಿತ್ತು. ನಂತರ, ಒಡಿಶಾದ ವ್ಯಕ್ತಿಯ ಭಾಷೆಯನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯೊಬ್ಬರು ಸಿಕ್ಕರು. ವಿಚಾರವನ್ನು ಖಚಿತಪಡಿಸಿಕೊಂಡ ಪೊಲೀಸರು ಪಾಂಗಿ ಅವರ ಪತ್ನಿಯ ಶವವನ್ನು ಅವರ ಗ್ರಾಮಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.