ಭುವನೇಶ್ವರ: ಸಹಾಯಕ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ದಾಸ್ ಎಂಬಾತ ಗುಂಡು ಹಾರಿಸಿ ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬ ಕಿಶೋರ್ ದಾಸ್ ಅವರನ್ನು ಹತ್ಯೆ ಮಾಡಿರುವುದು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಅವರ ಅಂತ್ಯಕ್ರಿಯೆ ಝಾರ್ಸುಗುಡಾ ಜಿಲ್ಲೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಇದೇ ವೇಳೆ, ದಾಸ್ ಹೊಂದಿದ್ದ ಖಾತೆಯನ್ನು ವಿತ್ತ ಸಚಿವ ನಿರಂಜನ್ ಪೂಜಾರಿ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.
ಗುಂಡು ಹಾರಿಸಿದ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದು, ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದರ ಹೊರತಾಗಿಯೂ ಕೂಡ ಅವರಿಗೆ ಸರ್ವಿಸ್ ರಿವಾಲ್ವರ್ ಮತ್ತು ಪೊಲೀಸ್ ಪೋಸ್ಟ್‌ನ ಉಸ್ತುವಾರಿಯನ್ನೂ ನೀಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಅದಕ್ಕೆ ಪೂರಕವಾಗಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.