ಭುವನೇಶ್ವರ : ಗುಂಡಿನ ದಾಳಿಗೊಳಗಾದ ಕೆಲವೇ ಗಂಟೆಗಳ ನಂತರ, ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಾಯಿಂಟ್ ಬ್ಲಾಂಕ್ ರೇಂಜ್ ನಿಂದ ಅವರ ಮೇಲೆ ಗುಂಡು ಹಾರಿಸಿದ ನಂತರ ಸಚಿವರಿಗೆ ಗಂಭೀರ ಗಾಯಗಳಾಗಿತ್ತು. ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರದ ಪಶ್ಚಿಮ ಒಡಿಶಾ ಪಟ್ಟಣದ ಜನನಿಬಿಡ ಚೌಕದಲ್ಲಿ ಈ ಘಟನೆ ನಡೆದಿತ್ತು.
“ದಾಳಿಯಲ್ಲಿ, ಒಂದೇ ಗುಂಡು ದೇಹವನ್ನು ಪ್ರವೇಶಿಸಿ ನಿರ್ಗಮಿಸಿತ್ತು, ಹೃದಯ ಮತ್ತು ಎಡ ಶ್ವಾಸಕೋಶಕ್ಕೆ ಹಾನಿಯಾಗಿತ್ತು ಭಾರೀ ಆಂತರಿಕ ರಕ್ತಸ್ರಾವ ಮತ್ತು ಗಾಯವನ್ನು ಉಂಟುಮಾಡಿತ್ತು. ವೈದ್ಯರ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ”ಎಂದು ಅಪೋಲೋ ಆಸ್ಪತ್ರೆಯ ಹೇಳಿಕೆ ನೀಡಿದೆ.
ಘಟನೆಯನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಖಂಡಿಸಿದ್ದು, ಘಟನೆ ನಡೆದ ಕೂಡಲೇ ಸಚಿವರು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿ ಅವರ ಪುತ್ರನನ್ನು ಭೇಟಿ ಮಾಡಿದ್ದರು.ಉನ್ನತ ತನಿಖೆಗೆ ಆದೇಶ ನೀಡಿದ್ದರು.
Related Articles
ಮುಖ್ಯಮಂತ್ರಿ ನಂತರದ ಎರಡನೇ ಶ್ರೀಮಂತ ಸಚಿವ ಎಂದು ಹೇಳಲಾದ 60 ವರ್ಷದ ದಾಸ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗಾಂಧಿ ಚಕ್ ಕಾರಿನಿಂದ ಇಳಿಯುತ್ತಿದ್ದಾಗ ಅವರನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ.
ಕೃತ್ಯ ಎಸಗಿದ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ದಾಸ್ ನನ್ನ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.