ಒಡಿಸ್ಸಾ: ಸಾರ್ವಜನಿಕರಿಗೆ ರಕ್ಷಕರಾಗಬೇಕಾಗಿದ್ದ ಖಾಕಿ ತೊಟ್ಟ ಮಹಿಳಾ ಆರಕ್ಷಕ ಅಧಿಕಾರಿಯೋರ್ವಳು ಗರ್ಭಿಣಿಯೋರ್ವಳ ಪಾಲಿಗೆ ರಾಕ್ಷಸಳಾದ ಘಟನೆ ಒಡಿಸ್ಸಾದ ಮಯೂರಭಂಜ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳಾ ಅಧಿಕಾರಿಯೋರ್ವಳು 8 ತಿಂಗಳ ಗರ್ಭವತಿ ಮಹಿಳೆಯನ್ನು ಮೂರು ಕಿ.ಮೀ ನಡೆಯುವಂತೆ ಮಾಡಿ ಅಮಾನವೀಯತೆ ತೋರಿದ್ದಾರೆ. ರೀನಾ ಬಕ್ಸಲಾ ಹೆಸರಿನ ಪೊಲೀಸ್ ಅಧಿಕಾರಿ ತುಂಬು ಗರ್ಭಿಣಿಗೆ ಕಾಲ್ನಡಿಗೆ ಶಿಕ್ಷೆ ನೀಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಶನಿವಾರ ಕರ್ತವ್ಯದಲ್ಲಿದ್ದ ರೀನಾ,ಹೆಲ್ಮೆಟ್ ಧರಿಸದ ಬಿಕ್ರಮ್ ಬರುಲಿ ಹಾಗೂ ಆತನ ಪತ್ನಿಯನ್ನು ತಡೆದು ದಂಡ ವಿಧಿಸಿದ್ದರು. ಈ ವೇಳೆ ಬಿಕ್ರಮ್ ಬರುಲಿ ಅವರ ಬಳಿ ನಗದು ಹಣ ಇಲ್ಲದಿದ್ದರಿಂದ ಆನ್‍ಲೈನ್ ಪೇಮೆಂಟ್ ಮಾಡಲು ಮುಂದಾಗಿದ್ದರು. ಆದರೆ, ಇದಕ್ಕೆ ಒಪ್ಪದ ಪೊಲೀಸ್ ಅಧಿಕಾರಿ ರೀನಾ,ಆ ದಂಪತಿಯನ್ನು ಸರತ್ ಪೊಲೀಸ್ ಠಾಣೆಯವರೆಗೆ ಬೈಕ್ ತಳ್ಳಿಕೊಂಡು ಬರುವ ಶಿಕ್ಷೆ ನೀಡಿದ್ದಾರೆ.
ಮಾನವೀಯತೆ ಮರೆತ ಮಹಿಳಾ ಅಧಿಕಾರಿ:
ಬೈಕ್ ಸವಾರ ಬಿಕ್ರಮ್ ಅವರ ಪತ್ನಿ 8 ತಿಂಗಳ ಗರ್ಭಿಣಿ. ಅವರಿಗೆ 3 ಕಿ.ಮೀ ನಡೆಯುವುದು ಕಷ್ಟದ ಕೆಲಸ. ಆದರೆ, ಇದ್ಯಾವುದನ್ನೂ ಲೆಕ್ಕಿಸದ ರೀನಾ, ಆಕೆಯನ್ನೂ ಗಂಡನ ಜತೆ ನಡೆದುಕೊಂಡು ಬರುವಂತೆ ಮಾಡಿದ್ದಾರೆ. ಇದರಿಂದ ಆ ಗರ್ಭಿಣಿಯ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಪೊಲೀಸ್ ಅಧಿಕಾರಿ ರೀನಾ ಅವರ ಕ್ರೂರತೆ ವಿರುದ್ಧ ಬಿಕ್ರಮ್ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ರೀನಾ ಅಮಾನತ್ತು:
ಗರ್ಭಿಣಿ ಮಹಿಳೆಯನ್ನು ಅಮಾವನೀಯವಾಗಿ ನಡೆಸಿಕೊಂಡ ರೀನಾ ಬಕ್ಸಲ್ ಅವರಿಗೆ ತಕ್ಕ ಶಿಕ್ಷೆಯಾಗಿದೆ. ಮಯೂರಭಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಮೀತಾ ಪರ್ಮಾರ್ ಅವರು ರೀನಾ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗೂ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದಾರೆ.