ಮಡಿಕೇರಿ : ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಹಾಗೂ ಮಡಿಕೇರಿ ನಗರ ದಸರಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ಮಡಿಕೇರಿಯಲ್ಲಿ ಕೊಡಗು ಜಾನಪದ ಉತ್ಸವ ನಡೆಯಲಿದೆ.
ಶನಿವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು, ಅಕ್ಟೋಬರ್ 3ರಂದು ನಡೆಯಲಿರುವ ಜಾನಪದ ಉತ್ಸವದಲ್ಲಿ ರಾಜ್ಯದ ವಿವಿಧೆಡೆಯ ಸುಮಾರು 40 ಕಲಾ ತಂಡಗಳು ಭಾಗವಹಿಸಲಿದ್ದು, ಅಂದು ಬೆಳಗ್ಗೆ 9.30ಕ್ಕೆ ನಗರದ ಮಂಗಳೂರು ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಬಳಿಯಿಂದ ಕಲಾ ಜಾಥಾ ನಡೆಯಲಿದೆ.
ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ಟಿ.ತಿಮ್ಮೇಗೌಡ ವಹಿಸಲಿದ್ದು, ಪುತ್ತೂರಿನ ಖ್ಯಾತ ವಾಗ್ಮಿ ಕೃಷ್ಣ ಉಪಾಧ್ಯಾಯ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಸಂಸದ ಪ್ರತಾಪ್‌ಸಿಂಹ, ವಿಧಾಣಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪೆನ್ನೇಕರ್ ಭಾಗವಹಿಸದ್ದಾರೆ ಎಂದರು.
ಪಾಲ್ಗೊಳ್ಳುವ ತಂಡಗಳು: ರಾಮನಗರದ ಚಿಕ್ಕನರಸಯ್ಯ ತಂಡದಿಂದ ಪಟಕುಣಿತ, ಪಾಂಡವಪುರದ ಶಿವಮಾದು ತಂಡದಿಂ¨ ಪೂಜಾಕುಣಿತ, ಕೃಷ್ಣೇ ಗೌಡ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ, ರಾಮನಗರದ ಪಾರ್ಥಸಾರಥಿ ತಂಡದಿಂದ ಡೊಳ್ಳು ಕುಣಿತ, ಮದ್ದೂರಿನ ಸಂತೋಷ್ ಮತ್ತು ತಂಡದಿಂದ ವೀರಗಾಸೆ, ಉತ್ತರ ಕರ್ನಾಟಕದ ಗೊಂದಳ್ಳಿ ಅಂಬಾಜಿ ಸುಗತೇಕರ ತಂಡದಿಂದ ಗೊಂದಳ್ಳಿ ಹಾಡು, ಮಡಿಕೇರಿಯ ನಾಟ್ಯ ಗಣಪತಿ ತಂಡದಿಂದ ಸುಗ್ಗಿಕುಣಿತ, ಸ್ಪೂರ್ತಿ ಮಹಿಳಾ ತಂಡದಿಂದ ಜಾನಪದ ಹಾಡು, ಸೋಮವಾರಪೇಟೆಯ ಕಾವೇರಿ ಕಲಾತಂಡದಿಂದ ಜನಪದ ನೃತ್ಯ, ಮೆಹರ್ ಮತ್ತು ತಂಡದಿಂದ ಜಾನಪದ ಗೀತೆ, ಹಿರಿಯ ಕಲಾವಿದೆ ರಾಣಿಮಾಚಯ್ಯ ತಂಡದಿಂದ ಉಮ್ಮತ್ತಾಟ್, ವೀರಾಜಪೇಟೆಯ ವಿಲಿನಾ ಮತ್ತು ತಂಡದಿಂದ ಕ್ರೆçಸ್ತ ಧರ್ಮದ ಜಾನಪದ ನೃತ್ಯ, ರಾಜ್ಯ ಪ್ರಶಸ್ತಿ ವಿಜೇತ ಬಾಳೆಲೆಯ ಜೇನುಕುರುಬರ ಮರಿ ಮತ್ತು ದಾಸಿ ತಂಡದಿಂದ ಸೋರೆಬುರುಡೆ ನೃತ್ಯ, ತೋರ ಗ್ರಾಮದ ಶಾರದಾ ಮತ್ತು ತಂಡದಿಂದ ಉರ್‌ಟಿ ಕೊಟ್ಟ್ ನೃತ್ಯ, ಬಿ.ಆರ್.ಸತೀಶ್ , ಟಿ.ಡಿ.ಮೋಹನ್ ತಂಡದಿಂದ ಜಾನಪದ ಕಲಾಕುಂಚ ಗಾನ, ಸಂಪಾಜೆಯ ಚಡಾವುನ ನೇತಾಜಿ ಗೆಳೆಯರ ಬಳಗದಿಂದ ಕಂಗೀಲು ನೃತ್ಯ, ಪುತ್ತೂರಿನ ಕೊಂಬೆಟ್ಟುವಿನ ಮರಾಠೆ ಯುವ ವೇದಿಕೆಯಿಂದ ಕಂಸಾಳೆ ನೃತ್ಯ, ಶಾಂತಳ್ಳಿಯ ಬಿ.ಎ.ಗಣೇಶ್ ಅವರಿಂದ ಜಾನಪದ ಹಾಡು, ಸೋಮವಾರಪೇಟೆಯ ಪ್ರಗತಿ ಪರ ಮಹಿಳಾ ವೇದಿಕೆಯಿಂದ ವಾಲಗ ನೃತ್ಯ, ಕಡಗದಾಳು ಸರ್ಕಾರಿ ಶಾಲಾ ಮಕ್ಕಳಿಂದ ಕೊಡವ ಜಾನಪದ ನೃತ್ಯ, ಮಡಿಕೇರಿಯ ಹ್ಯಾರೀಸ್ ಮತ್ತು ತಂಡದಿಂದ ದಫ್ ನೃತ್ಯ ಭಾಗಮಂಡಲದ ಮಿಲನಾ ಮತ್ತು ತಂಡದಿಂದ ಜಾನಪದ ವೈಭವ, ಮಡಿಕೇರಿಯ ಸೋನು ಪ್ರೀತಂ ತಂಡದಿಂದ ಜಾನಪದ ಗೀತಗಾಯನ, ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ಮಕ್ಕಳಿಂದ ಸುಗ್ಗಿ ನೃತ್ಯ, ಭಾಗಮಂಡಲದ ಜ್ಞಾನೋದಯ ಶಾಲಾ ತಂಡದಿಂದ ಸೋಲಿಗರ ನೃತ್ಯ, ಮಾಲ್ದಾರೆಯ ಮುತ್ತಪ್ಪ ತಂಡದಿಂದ ಚಂಡೆವಾದ್ಯ ಸೇರಿದಂತೆ ಮತ್ತಷ್ಟು ತಂಡಗಳಿಂದ ಅಂದು ಮಧ್ಯಾಹ್ನ 12.30 ರಿಂದ ಸುಮಾರು 4 ಗಂಟೆಗಳ ಜಾನಪದ ವೈಭವ ಪ್ರದರ್ಶನ ನೀಡಲಿವೆ ಎಂದರು.ಎಚ್.ಟಿ.ಅನಿಲ್ ಅಂಬೆಕಲ್ ಕುಶಾಲಪ್ಪ, ಮುನೀರ್ ಅಹ್ಮದ್, ಚಂದ್ರಮೋಹನ್ ಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಇದೇ ಸಂದರ್ಭ ಸಂಗೀತ ಕ್ಷೇತ್ರದ ಸಾಧಕ ಚೆಕ್ಕೇರ ತ್ಯಾಗರಾಜ್, ಕನ್ನಡ ಭಾಷಾ ಸಾಧಕ ಬಿ.ಎಸ್. ಲೋಕೇಶ್‌ಸಾಗರ್ ಹಾಗೂ ಸಾಹಿತ್ಯ ಸೇವೆಗಾಗಿ ಮನೆಮನೆ ಕವಿಗೋಷ್ಠಿ ಖ್ಯಾತಿಯ ವೈಲೇಶ್ ಅವರನ್ನು ಸಮ್ಮಾನಿಸಲಾಗುವುದು ಎಂದು ತಿಳಿಸಿದರು.ಸಂಜೆ ತಿಮ್ಮೇಗೌಡ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ರಂಗಭೂಮಿ ಕಲಾವಿದ ಅಡ್ಡಂಡ ಸಿ.ಕಾರ್ಯಪ್ಪ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಜಾನಪದ ಉತ್ಸವಕ್ಕೆ ಸುಮಾರು 4.50 ಲಕ್ಷ ರೂ. ವೆಚ್ಚವಾಗುವ ನಿರೀಕ್ಷೆಯಿದ್ದು, ಮಡಿಕೇರಿ ನಗರ ದಸರಾ ಸಮಿತಿಯು 1.50 ಲಕ್ಷ ರೂ.ಅನುದಾನ ನೀಡುವ ಭರವಸೆಯಿತ್ತಿದೆ ಎಂದು ಅನಂತಶಯನ ನುಡಿದರು.