ಉಡುಪಿ: ದ.ಕ., ಉಡುಪಿ ಜಿಲ್ಲೆಯ ಹಿರಿಯರು ಸೇರಿ 1999- 2000ದಲ್ಲಿ ಜಿಲ್ಲಾ ಕಂಬಳ ಸಮಿತಿ ರಚನೆ ಮಾಡಿ ಕಟ್ಟುಪಾಡು, ನಿಯಮಗಳನ್ನು ರೂಪಿಸಿದ್ದಾರೆ.
ಆದರೆ ಈಗ ಒಂದಿಷ್ಟು ಜನರು ಸೇರಿಕೊಂಡು ನಿಯಮಗಳನ್ನು ಗಾಳಿಗೆ ತೂರಿ ಹೊಸ ಸಮಿತಿಯನ್ನು ರಚನೆ ಮಾಡಿದ್ದು, ರಾಜ್ಯ ಮಟ್ಟದ ಸಮಿತಿ ರಚನೆಯಲ್ಲಿಯೂ ಅವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ದ.ಕ., ಉಡುಪಿ ಜಿಲ್ಲಾ ಕಂಬಳ ಸಮಿತಿ ಅಜೀವ ಸದಸ್ಯ ಲೋಕೇಶ್ ಶೆಟ್ಟಿ ಮುಚ್ಚಾರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ದ.ಕ. ಸಮಿತಿಯಲ್ಲಿ 90 ಜನರು ಅಜೀವ ಸದಸ್ಯರಿದ್ದು, 35 ಮಂದಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಭೆಗೆ ಕರೆಯದೆ ನೋವುಂಟು ಮಾಡಿದ್ದಾರೆ. ಈ ಸಮಿತಿಯನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯವು ಅದನ್ನು ತಡೆ ಹಿಡಿದು ಜಿಲ್ಲಾ ನೋಂದಣಾಧಿಕಾರಿ ಅವರಿಗೆ ಜಿಲ್ಲಾ ಕಂಬಳ ಸಮಿತಿ ನಿಯಮದ ಪ್ರಕಾರ ಸಮಿತಿ ರಚಿಸಿಲು ಆದೇಶ ನೀಡಿದೆ.
ಈ ಬಗ್ಗೆ ನೋಂದಣಾಧಿಕಾರಿಯವರು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಪರಿಶೀಲಿಸುತ್ತೇವೆ. ಈ ನಡುವೆ ಸರ ಕಾರ ರಾಜ್ಯ ಮಟ್ಟದ ಕಂಬಳ ಸಮಿತಿ ರಚನೆ ಮಾಡುವ ಬಗ್ಗೆ ಸೂಚನೆ ನೀಡಿದೆ ಎಂದರು.
Related Articles
ಎಲ್ಲ ಸದಸ್ಯರ ಗಮನಕ್ಕೆ ತರದೇ ಈಗಾಗಲೇ ರಾಜ್ಯಮಟ್ಟದ ಸಮಿತಿಗೆ ಹೆಸರನ್ನು ಕಳುಹಿಸಿರುವುದು ಸರಿಯಾದ ಕ್ರಮವಲ್ಲ. ಇದರ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ. ಎಲ್ಲ ಸದಸ್ಯರ ಸಭೆ ಕರೆದು ಅನಂತರ ಸಮಿತಿ ರಚನೆಗೆ ಸರಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು. ಸುಧಾಕರ ಹೆಗ್ಡೆ, ವೆಂಕಟ್ ಪೂಜಾರಿ, ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು.