Advertisement

Objection: ಕುಲಪತಿ ನೇಮಕದಲ್ಲಿ ಬದಲಾವಣೆ: ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಪತ್ರ

01:32 AM Jan 15, 2025 | Team Udayavani |

ಬೆಂಗಳೂರು: ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವು ಉನ್ನತ ಶಿಕ್ಷಣದಲ್ಲಿ ಪ್ರಾಧ್ಯಾಪಕರು ಮತ್ತಿತರ ಶೈಕ್ಷಣಿಕ ಸಿಬಂದಿಯ ನೇಮಕಾತಿ ಅರ್ಹತೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹೊರಡಿಸಿರುವ ಕರಡು ಮಾರ್ಗಸೂಚಿಗೆ ರಾಜ್ಯ ಸರಕಾರ ಅಧಿಕೃತವಾಗಿ ತನ್ನ ಆಕ್ಷೇಪ ವ್ಯಕ್ತಪಡಿಸಿದ್ದು, ಕರಡು ಮಾರ್ಗಸೂಚಿಯನ್ನು ಹಿಂಪಡೆಯುವಂತೆ ಆಗ್ರಹಿಸಿದೆ.

Advertisement

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದು, ಕುಲಪತಿ ನೇಮಕದಲ್ಲಿ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ನೀಡುವ ತಿದ್ದುಪಡಿಯನ್ನು ಬಲವಾಗಿ ಖಂಡಿಸಿದ್ದು, ದೇಶದ ಒಕ್ಕೂಟ ವ್ಯವಸ್ಥೆಗೆ ಇದರಿಂದ ಧಕ್ಕೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರಡು ಮಾರ್ಗಸೂಚಿಯ ಪ್ರಕಾರ ವಿವಿಗಳ ಕುಲಪತಿಗಳ ನೇಮಕದಲ್ಲಿ ರಾಜ್ಯ ಸರಕಾರಕ್ಕೆ ಯಾವುದೇ ಪಾತ್ರವಿಲ್ಲ. ಕುಲಪತಿಗಳ ನೇಮಕ ಮಾಡುವ ಸರ್ಚ್‌ ಮತ್ತು ಆಯ್ಕೆ ಸಮಿತಿಯನ್ನು ರಾಜ್ಯಪಾಲ (ಕುಲಾಧಿಪತಿ) ಅವರು ನೇಮಿಸಲಿದ್ದು, ಇದರಲ್ಲಿ ರಾಜ್ಯ ಸರಕಾರದ ನಾಮಿನಿಗಳಿಗೆ ಜಾಗ ನೀಡಲಾಗಿಲ್ಲ. ಸರ್ಚ್‌ ಮತ್ತು ಆಯ್ಕೆ ಸಮಿತಿಯು ನೀಡಿದ ಹೆಸರುಗಳನ್ನು ಹೊರತುಪಡಿಸಿ ಅನ್ಯರನ್ನು ಕುಲಪತಿಯನ್ನಾಗಿ ನೇಮಕ ಮಾಡುವ ಅಧಿಕಾರವನ್ನು ರಾಜ್ಯಪಾಲರಿಗೆ ಮಾತ್ರ ನೀಡಿರುವುದು ಸಮಂಜಸವಾಗಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಶೈಕ್ಷಣಿಕೇತರರನ್ನು ಕುಲಪತಿಯನ್ನಾಗಿ ನೇಮಿಸಲು ಅವಕಾಶ ನೀಡಿರುವುದರ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು. ಒಂದು ವೇಳೆ ಕುಲಪತಿ ನೇಮಕವನ್ನು ನಿಯಮ ಪ್ರಕಾರ ನಡೆಸದಿದ್ದರೆ ಆ ನೇಮಕಾತಿ ಅಸಿಂಧುಗೊಳ್ಳುತ್ತದೆ ಎಂಬ ನಿಯಮ ಸೇರಿದಂತೆ ಕುಲಪತಿಗಳ ಅವಧಿ, ಮರು ಆಯ್ಕೆ ನಿಯಮಗಳು ರಾಜ್ಯ ಸರಕಾರದ ಕಾನೂನಿಗೆ ವಿರುದ್ಧವಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ತಮ್ಮ ವಿರೋಧವನ್ನು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.