Advertisement

ಬರದಲ್ಲಿ ಆಸರೆಯಾಯ್ತು ‘ಉದ್ಯೋಗ ಖಾತ್ರಿ’

01:12 PM May 18, 2019 | Naveen |

ಔರಾದ: ತಾಲೂಕಿನಲ್ಲಿ ಪ್ರಸಕ್ತ ವರ್ಷ ತಲೆದೋರಿರುವ ಭೀಕರ ಬರದಲ್ಲಿ ಕೂಲಿ ಕಾರ್ಮಿಕರು, ರೈತರು ಹಾಗೂ ಕುಟುಂಬದವರ ನಿತ್ಯ ಉಪಜೀವನಕ್ಕೆ ಉದ್ಯೋಗ ಖಾತ್ರಿ ಯೋಜನೆ ಆಶ್ರಯವಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕಡಿಮೆ ಆಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಕೂಲಿ ಕಾರ್ಮಿಕರ ಹಾಗೂ ರೈತರ ಕುಟುಂಬಕ್ಕೆ ತೊಂದರೆಯಾಗಿತ್ತು. ಆದರೆ ಉದ್ಯೋಗ ಖಾತ್ರಿ ಯೋಜನೆ ನಿತ್ಯ ಜೀವನಕ್ಕೆ ಆಸರೆಯಾಗಿದೆ. ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ರೈತರ ಜಾನುವಾರುಗಳಿಗೆ ಮೇವು, ನೀರು ಸಿಗದೇ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ರೈತರ ಹೊಲದಲ್ಲೂ ಕೂಲಿ ಕೆಲಸ ಇಲ್ಲದಿರುವುದರಿಂದ ಕೂಲಿ ಕಾರ್ಮಿಕರು ಪಟ್ಟಣ ಹಾಗೂ ನಗರ ಪ್ರದೇಶಕ್ಕೆ ಗುಳೆ ಹೋಗುವ ಸಮಯದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರು ಪ್ರತಿ ಗ್ರಾಮದಲ್ಲೂ ಉದ್ಯೋಗ ಖಾತ್ರಿ ಯೋಜನೆ ಕೆಲಸದ ಅರಿವು ಮೂಡಿಸಿ ದುಡಿಯುವ ಕೈಗಳಿಕೆ ಕೆಲಸ ನೀಡಿದ್ದಾರೆ.

ತಾಲೂಕಿನ 39 ಗ್ರಾಪಂಗಳಲ್ಲಿ 28,307 ಕೂಲಿ ಕಾರ್ಮಿಕರ ಕುಟುಂಬಗಳಿವೆ. ಈ ಪೈಕಿ ಕಳೆದ ಏಪ್ರಿಲ್ನಿಂದ ಈ ವರೆಗೆ ಎರಡು ತಿಂಗಳಲ್ಲಿ ತಾಲೂಕಿನ ಅತಿ ಹೆಚ್ಚು ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದ ಹಿರಿಮೆ ಠಾಣಾಕುಶನೂರ ಗ್ರಾಪಂಗೆ ಸಲ್ಲುತ್ತದೆ. ಠಾಣಾಕುಶನೂರ ಗ್ರಾಪಂನಲ್ಲಿ 4,188 ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಅದರಂತೆ ತಾಲೂಕಿನಲ್ಲಿ ಅತಿ ಕಡಿಮೆ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದ್ದು ಕಮಲನಗರ ಗ್ರಾಪಂ. ಕೇವಲ 102 ಜನರಿಗೆ ಲಾಧಾ ಗ್ರಾಪಂನಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ.

ಉತ್ತಮ 10 ಪಂಚಾಯತ್‌: ಠಾಣಾಕುಶನೂರ ಗ್ರಾಪಂನಲ್ಲಿ 4,188 ಜನರಿಗೆ, ಕೋರೆಕಲ್ ಗ್ರಾಪಂ 2663, ಗುಡಪಳ್ಳಿ ಗ್ರಾಪಂ 2519, ಸೋನಾಳ ಗ್ರಾಪಂ 2074, ಚಿಕಲಿ ಯು ಗ್ರಾಪಂ 1804, ಎಕಂಬಾ ಗ್ರಾಪಂ 1636, ಚಾಂದೋರಿ ಗ್ರಾಪಂ 1567, ಡೋಣಗಾಂವ (ಎಂ) ಗ್ರಾಪಂ 1587, ಸುಂಧಾಳ ಗ್ರಾಪಂ 1497, ಬೋಂತಿ ಗ್ರಾಪಂ 1455, ಚಿಮ್ಮೇಗಾಂವ 1,406 ಜನರಿಗೆ ಎರಡು ತಿಂಗಳಲ್ಲಿ ಕೆಲಸ ನೀಡಲಾಗಿದೆ.

ಸ್ವಂತ ಊರಲ್ಲೇ ಕೆಲಸ: ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಭೀಕರ ಬರ ಇರುವುದರಿಂದ ಕೂಲಿ ಕಾರ್ಮಿಕರು ಹಾಗೂ ಸಣ್ಣ, ಅತಿ ಸಣ್ಣ ರೈತರು ತಮ್ಮ ಕುಟುಂಬದ ಸದಸ್ಯರೊಂದಿಗೆ ಗುಳೆ ಹೋಗುವ ಲೆಕ್ಕಚಾರದಲ್ಲಿ ಇದ್ದರು. ಆಗ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಾರ್ಡ್‌ ಸದಸ್ಯರು ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಜನರಲ್ಲಿ ಅರಿವು ಮೂಡಿಸಿ, ಕೂಲಿ ಕಾರ್ಮಿಕರಿಗೆ ಅವರ ಗ್ರಾಮದಲ್ಲಿಯೇ ಕೆಲಸ ನೀಡಿ ಮಹತ್ವ ಕಾರ್ಯವನ್ನು ಪಂಚಾಯತ ಅಧಿಕಾರಿಗಳು ಮಾಡುತ್ತಿದ್ದಾರೆ.

Advertisement

ಕೇಳಿದ ತಕ್ಷಣ ಕೆಲಸ: ಜಿಪಂ ಸಿಇಒ ಆದೇಶದಂತೆ, ಪಂಚಾಯತ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲೂ ಕೆಲಸಕ್ಕಾಗಿ ಕಾರ್ಮಿಕರು ಪಂಚಾಯತಗೆ ಬಂದು ಅರ್ಜಿ ನೀಡಿದ ತಕ್ಷಣದಿಂದಲೇ ಹಾಗೂ ಕೂಲಿ ಕೆಲಸ ನೀಡುವಂತೆ ದೂರವಾಣಿ ಮೂಲಕ ಮನವಿ ಮಾಡಿಕೊಂಡರೂ ತಕ್ಷಣವೇ ಅವರ ಗ್ರಾಮಕ್ಕೆ ಹೋಗಿ ಕಾತ್ರಿ ಯೋಜನೆಯಲ್ಲಿ ಕೆಲಸ ನೀಡುವ ಮಹತ್ವದ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಸುಂಧಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಘಾಟೆ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಜಲಮೂಲಗಳು ಸಂಪೂರ್ಣ ಒಣಗಿರುವುದರಿಂದ ಕೆರೆ, ತೆರೆದ ಬಾವಿಯಲ್ಲಿನ ಹೂಳು ತೆಗೆಯುವ ಕೆಲಸ, ರೈತರ ಹೊಲದಲ್ಲಿ ಕಲ್ಲು ಆಯುವ ಕೆಲಸ, ಮಳೆ ನೀರಿನಿಂದ ರೈತರ ಹೊಲಕ್ಕೆ ಆಶ್ರಯ ನೀಡುವಂತಹ ಕೆಲಸಗಳು, ಕೃಷಿ ಹೊಂಡ, ಜಲಮೂಲಗಳ ಸುಧಾರಣೆ, ರೈತರ ಜಾನುವಾರುಗಳನ್ನು ಕಟ್ಟಲು ಕೊಟ್ಟಿಗೆ, ವೈಯಕ್ತಿಕ ಬಾವಿಯಲ್ಲಿ ಹೂಳೆತ್ತುವ ಕೆಲಸ ಸೇರಿದಂತೆ ಇನ್ನಿತರ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ.

ತಾಲೂಕಿನ ಠಾಣಾಕುಶನೂರ ಗ್ರಾಪಂ ತಾಲೂಕಿನಲ್ಲಿಯೇ ಅತಿ ಹೆಚ್ಚು ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ದಾಖಲೆ ಮಾಡಿದೆ. ಅದರಂತೆ ಕೋರೆಕಲ ಗ್ರಾಪಂ ಎರಡನೇ ಸ್ಥಾನ ಮತ್ತು ಗುಡಪ್ಪಳ್ಳಿ ಪಂಚಾಯತ ಮೂರನೇ ಸ್ಥಾನದಲ್ಲಿದೆ. ನಾಗಮಾರಪಳ್ಳಿ, ಸುಂಧಾಳ, ಚಿಂತಾಕಿ, ಚಿಮ್ಮೇಗಾಂವ, ಕಲಮನಗರ, ದಾಬಕಾ, ಬೋಂತಿ ಸೇರಿದಂತೆ ಇನ್ನೂಳಿದ ಪಂಚಾಯತನಲ್ಲೂ ಅಧಿಕಾರಿಗಳು ಜನರಿಗೆ ತಕ್ಷಣವೇ ಕೆಲಸ ನೀಡುತ್ತಿದ್ದಾರೆ.

ಗಡಿಯಲ್ಲಿ ಪ್ರಚಾರ ಕೊರತೆ: ತಾಲೂಕು ಕೇಂದ್ರದ ಅಕ್ಕಪಕ್ಕದಲ್ಲೂ ಗ್ರಾಪಂಗಳಲ್ಲಿ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಿ ಕೆಲಸ ನೀಡುತ್ತಿದ್ದಾರೆ. ಮರಾಠಿ ಹಾಗೂ ತೆಲುಗು ಭಾಷಿಕರು ಹೆಚ್ಚಾಗಿ ವಾಸವಾಗಿರುವ ದಾಬಕಾ ಹೋಬಳಿ ವ್ಯಾಪ್ತಿಯ ಗ್ರಾಪಂನಲ್ಲಿ ಇಲಾಖೆಯ ಗುರಿಯಂತೆ, ನಿರೀಕ್ಷೆಯಂತೆ ಕೆಲಸಗಳು ನಡೆಯುತ್ತಿಲ್ಲ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿವೆ. ಹಿಗಾಗಿ ತಾಪಂ ಇಒ ಹಾಗೂ ದಾಬಕಾ ವ್ಯಾಪ್ತಿಯ ಪ್ರತಿಯೊಂದು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕೂಡ ಬರದಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ಜೀವನಕ್ಕೆ ಆಶ್ರಯ ನೀಡಬೇಕು ಎನ್ನುವುದು ಜನಸಾಮಾನ್ಯರ ಹಾಗೂ ಅಧಿಕಾರಿಗಳ ಮಾತು.

ಪಂಚಾಯತ ವ್ಯಾಪ್ತಿಯಲ್ಲಿ ಕೆಲಸಕ್ಕೆ ಬರುವ ಹಾಗೂ ಅರ್ಜಿ ಸಲ್ಲಿಸಿದ ಕೂಲಿ ಕಾರ್ಮಿಕರಿಗೆ ತಕ್ಷಣವೇ ಕೆಲಸ ನೀಡಲಾಗುತ್ತಿದೆ. ಆಸಕ್ತಿ ಉಳ್ಳ ರೈತರು ತಮ್ಮ ಹೊಲದಲ್ಲಿ ಕೆಲಸ ಮಾಡಿದರೂ ಖಾತ್ರಿ ಯೋಜನೆಯಲ್ಲಿ ಕೂಲಿ ಹಣ ನೀಡಲಾಗುತ್ತದೆ ಎಂದು ಡಂಗುರ ಸಾರಿದ್ದೇವೆ. ಪ್ರತಿಯೊಬ್ಬರಿಗೂ ಕೂಲಿ ಕೆಲಸ ನೀಡುತ್ತೇವೆ.
ಶಿವಾನಂದ ಔರಾದೆ,
ಗ್ರಾಪಂ ಅಭಿವೃದ್ಧಿ ಅಧಿಕಾರಿ

ತಾಲೂಕಿನಲ್ಲಿ ಭೀಕರ ಬರ ಇರುವುದರಿಂದ ಗ್ರಾಮೀಣ ಭಾಗದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ ಸಬ್ಬಂಧ ಪಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಅವರು ಕೆಲಸ ಮಾಡುತ್ತಿದ್ದಾರೆ.
ವೈಜಣ್ಣ, ತಾಪಂ ಎಡಿ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next