Advertisement

ನೀರಿನ ಸಮಸ್ಯೆ ಬಗೆಹರಿಸಲು ಮುಂದಾದ ಅಧಿಕಾರಿಗಳು

12:21 PM May 02, 2019 | Team Udayavani |

ಔರಾದ: ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಪ್ರತಿಯೊಂದು ವಾರ್ಡ್‌ಗಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.ಅಲ್ಲದೆ ಬಡಾವಣೆಯಲ್ಲಿರುವ ಜಲಮೂಲ ಅರಿತುಕೊಂಡು ಬಾವಿಯಲ್ಲಿನ ಹೂಳೆತ್ತುವ ಕೆಲಸಕ್ಕೂ ಚಾಲನೆ ನೀಡಿದ್ದಾರೆ.

Advertisement

ಪಟ್ಟಣದಲ್ಲಿನ ನೀರಿನ ಸಮಸ್ಯೆ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ವಿವಿಧ ಬಡಾವಣೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ನೇತೃತ್ವದಲ್ಲಿ ಧನರಾಜ ಕುಡ್ಲೆ ಸೇರಿದಂತೆ ಇನ್ನಿತರರು ಪಟ್ಟಣದಲ್ಲಿರುವ ಜಲಮೂಲ ವೀಕ್ಷಿಸಿದರು. ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಕೆಲ ಬಾವಿಗಳಲ್ಲಿ ನೀರು ಇದೆ. ಆದರೆ ಅದರಲ್ಲಿ ಕಸ ತುಂಬಿದ್ದರಿಂದ ಸಾರ್ವಜನಿಕ ಉಪಯೋಗಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ವಿವರಿಸಿದರು.

ಪಟ್ಟಣದ ಇಂದಿರಾ ಕಾನ್ವೆಂಟ್ ಶಾಲೆ ಪಕ್ಕದಲ್ಲಿನ ಬಾವಿಯಲ್ಲಿ ಬಿದ್ದ ಕಸ ನೋಡಿ ಪಪಂ ಮುಖ್ಯಾಧಿಕಾರಿ ಸಿಬ್ಬಂದಿ ವಿರುದ್ಧ ಗರಂ ಆಗಿದ್ದರು. ಬಾವಿಯಲ್ಲಿರುವ ಕಸವನ್ನು ತಕ್ಷಣವೇ ತೆಗೆದು ಸಾರ್ವಜನಿಕರು ನೀರು ಬಳಸಲು ಬರುವಂತೆ ಮಾಡಲು ಮುಂದಾಗಬೇಕು. ಇಲ್ಲವಾದಲ್ಲಿ ಸಬಂಧಿಸಿದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತೆರೆದ ಬಾವಿಯಿಂದ ಸಾರ್ವಜನಿಕರು ನಿತ್ಯ ತಮ್ಮ ಮನೆಗೆ ನೀರು ತೆಗೆದುಕೊಂಡು ಹೋಗುತ್ತಾರೆ. ಬಾವಿಯಲ್ಲಿ ಕಸದ ರಾಶಿಯೇ ತುಂಬಿದೆ. ಕಚೇರಿ ಸಿಬ್ಬಂದಿ ಪಟ್ಟಣದಲ್ಲಿ ತೆರೆದ ಬಾವಿ ಹಾಗೂ ಜಲಮೂಲಗಳ ಸುತ್ತಮುತ್ತಲು ಸ್ವಚ್ಛ ತೆ ಕಾಪಾಡಿಕೊಳ್ಳಲು ಮುಂದಾಗಬೇಕು. ಅಲ್ಲದೇ ಸಾರ್ವಜನಿಕರಿಗೂ ಸ್ವಚ್ಛತೆ ಬಗ್ಗೆ ತಿಳಿಹೇಳಬೇಕು ಎಂದು ಸೂಚಿಸಿದರು.

Advertisement

ಪಟ್ಟಣದ ನಿವಾಸಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಪ್ರತಿಯೊಂದು ಬಡಾವಣೆ ನಿವಾಸಿಗಳು ಸಮಾಧಾನದಿಂದ ಟ್ಯಾಂಕರ್‌ ನೀರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಟ್ಯಾಂಕರ್‌ ನೀರು ಪೂರೈಸುವಾಗ ಬಡಾವಣೆ ನಿವಾಸಿಗಳೊಂದಿಗೆ ಕಚೇರಿ ಸಿಬ್ಬಂದಿ ಸಹ ಸಹಕಾರ ನೀಡಲು ಮುಂದಾಗುವಂತೆ ಸೂಚಿಸಿದರು.

ಪಟ್ಟಣದ ಹಳೆ ಬಾವಿಯಲ್ಲಿ ನೀರಿದೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ತಹಶೀಲ್ದಾರರೊಂದಿಗೆ ಮಾತನಾಡಿ ನೀರಿನ ಸಮಸ್ಯೆಯಿಂದ ಮುಕ್ತಿ ನೀಡಲಾಗುತ್ತದೆ ಎಂದು ಪಪಂ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next