Advertisement
ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಈ ಬಾರಿ ಮಣಿಸಲು ಬಿಜೆಪಿ ಸಜ್ಜಾಗಿ ಕಾರ್ಯತಂತ್ರ ಹಣೆಯುತ್ತಿದೆ. ಪ್ರಬಲ ಆಕಾಂಕ್ಷಿಗಳಾಗಿರುವ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತು ಪರಾಜಿತ ಅಭ್ಯರ್ಥಿ ಡಿ.ಕೆ. ಸಿದ್ರಾಮ್ ಸದ್ಯ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದು, ಶಾಸಕ ಖಂಡ್ರೆ ವಿರುದ್ಧ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಖೂಬಾ ಸಾರಥ್ಯ: ಆದರೆ ಕ್ಷೇತ್ರದಲ್ಲಿ ಕೇಸರಿ ಪಡೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ವರಿಷ್ಠರಿಗೆ ಕಗ್ಗಂಟಾಗಿದ್ದಲ್ಲದೇ ಟಿಕೆಟ್ ವಂಚಿತರು ಬಂಡಾಯ ಇಲ್ಲವೇ ಬೇರೆ ಪಕ್ಷಕ್ಕೆ ಹಾರುವ ಭೀತಿಯೂ ಇದೆ. ಪ್ರತಿ ಬಾರಿ ಟಿಕೆಟ್ ವಂಚಿತರ ಮುನಿಸಿನಿಂದಾಗಿ ಪಕ್ಷ ಸೋಲುಣ್ಣುತ್ತ ಬಂದಿದೆ. ಹಾಗಾಗಿ ಇದನ್ನು ತಪ್ಪಿಸಲು ಪಕ್ಷದ ನಾಯಕರು ದೇವರ ಮೇಲೆ ಪ್ರಮಾಣ ಮಾಡಿಸಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಸಾರಥ್ಯ ವಹಿಸಿದ್ದರೆ, ಜಿಲ್ಲೆಯ ಬಿಜೆಪಿಹಿರಿಯ ನಾಯಕರು ಸಾಕ್ಷಿಯಾಗಿದ್ದಾರೆ.
ಶಾಸಕ ಈಶ್ವರ ಖಂಡ್ರೆ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ಮಧ್ಯದ ರಾಜಕೀಯ ಕುಸ್ತಿ ದಿನ ಕಳೆದಂತೆ ಹೆಚ್ಚುತ್ತಿದ್ದು, ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಅವರನ್ನು ಶತಾಯ ಗತಾಯ ಸೋಲಿಸಲು ಕಸರತ್ತು ನಡೆಸುತ್ತಿದ್ದಾರೆ. ಆಣೆ-ಪ್ರಮಾಣದ ಹೆಸರಿನಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳನ್ನು ಒಂದುಗೂಡಿಸಿ ಪಕ್ಷವನ್ನು ಬಲಿಷ್ಠಗೊಳಿಸುವುದರ ಜತೆಗೆ ಮುಂದೆ ಎದುರಾಗಬಹುದಾದ ಬಂಡಾಯ ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ
Related Articles
Advertisement