ವೆಲ್ಲಿಂಗ್ಟನ್: ಇಂಗ್ಲೆಂಡ್ನ ಮಧ್ಯಮ ಕ್ರಮಾಂಕದ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಮತ್ತೊಂದು ಶತಕದೊಂದಿಗೆ ಅಬ್ಬರಿಸಿದ್ದಾರೆ.
ಶುಕ್ರವಾರ ಮೊದಲ್ಗೊಂಡ ನ್ಯೂಜಿಲ್ಯಾಂಡ್ ಎದುರಿನ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅವರು 123 ರನ್ ಬಾರಿಸಿದರು. ಇಂಗ್ಲೆಂಡ್ 280 ರನ್ ಗಳಿಸಿದ್ದು, ನ್ಯೂಜಿಲ್ಯಾಂಡ್ 86ಕ್ಕೆ 5 ವಿಕೆಟ್ ಉರುಳಿಸಿಕೊಂಡು ಅಪಾಯಕ್ಕೆ ಸಿಲುಕಿದೆ.
ಹ್ಯಾರಿ ಬ್ರೂಕ್ ಕ್ರೈಸ್ಟ್ಚರ್ಚ್ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ನಲ್ಲಿ 171 ರನ್ನುಗಳ ಅಮೋಘ ಪ್ರದರ್ಶನ ನೀಡಿದ್ದರು. ಈ ಪಂದ್ಯವನ್ನು 8 ವಿಕೆಟ್ಗಳಿಂದ ಗೆದ್ದ ಇಂಗ್ಲೆಂಡ್ 1-0 ಮುನ್ನಡೆಯಲ್ಲಿದೆ. ಇಂಗ್ಲೆಂಡ್ 43ಕ್ಕೆ 4 ವಿಕೆಟ್ ಕಳೆದು ಕೊಂಡ ಸಂಕಟದಲ್ಲಿತ್ತು. ಆಗ ಬ್ರೂಕ್-ಓಲೀ ಪೋಪ್ (66) ಸೇರಿಕೊಂಡು ತಂಡವನ್ನು ಮೇಲೆತ್ತಿದರು. 5ನೇ ವಿಕೆಟಿಗೆ 174 ರನ್ ಹರಿದು ಬಂತು. ಈ ಜೋಡಿ ಬೇರ್ಪಟ್ಟ ಬಳಿಕ ಕಿವೀಸ್ ಬೌಲರ್ ಮೇಲುಗೈ ಸಾಧಿಸಿದರು.
ಆಕ್ರಮಣಕಾರಿ ಆಟ:
ಬ್ರೂಕ್ ಆಟ ಅತ್ಯಂತ ಆಕ್ರಮಣಕಾರಿಯಾಗಿತ್ತು. ಅವರ 123 ರನ್ ಕೇವಲ 115 ಎಸೆತಗಳಿಂದ ಬಂತು. ಸಿಡಿಸಿದ್ದು 11 ಬೌಂಡರಿ ಹಾಗೂ 5 ಸಿಕ್ಸರ್. ಇದು ಅವರ 8ನೇ ಟೆಸ್ಟ್ ಶತಕ.