Advertisement

ಪೌಷ್ಟಿಕಾಹಾರ ಅನುದಾನ ಹೆಚ್ಚಳ ಚಿಂತನೆ

12:30 AM Feb 05, 2019 | Team Udayavani |

ಉಡುಪಿ: ಕ್ರೀಡಾ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಪೋಷಕಾಂಶ ಆಹಾರದ ಅನುದಾನವನ್ನು ದುಪ್ಪಟ್ಟು ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್‌ ತಿಳಿಸಿದರು. ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸೋಮವಾರ ಅಜ್ಜರಕಾಡಿನ ಬಾಲಕಿಯರ ಕ್ರೀಡಾ ವಸತಿ ನಿಲಯ, ಹವಾನಿಯಂತ್ರಿತ ಜಿಮ್‌ ಕೊಠಡಿ, ಸಿಂಥೆಟಿಕ್‌ ಟೆನಿಸ್‌ ಅಂಕಣ, ವಿಕಲಚೇತನ ಸ್ನೇಹಿ ಶೌಚಾಲಯ ಹಾಗೂ ರ್‍ಯಾಂಪ್‌ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕ್ರೀಡೆಗೆ ಪ್ರೋತ್ಸಾಹ ನೀಡುವ ವಿಶೇಷ ಕಾಳಜಿಯನ್ನು ಸರಕಾರ ಹೊಂದಿದ್ದು, ಕ್ರೀಡಾಪಟುಗಳಿಗೆ ನೀಡುವ ಪೋಷಕಾಂಶ ಆಹಾರದ ಅನುದಾನ ಹೆಚ್ಚಿಸುವ ಕುರಿತು ಇಲಾಖೆಯ ಅಧಿಕಾರಿಗಳ ಜತೆಗೆ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಚರ್ಚಿಸಲಾಗಿದೆ. ಅದನ್ನು ಮುಂದಿನ ಬಜೆಟ್‌ನಲ್ಲಿ ಆಳವಡಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದರು.

5ಲಕ್ಷ ರೂ. ಘೋಷಣೆ
ಜಿಲ್ಲೆಯ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್‌ ಕ್ರೀಡಾಪಟುಗಳಾದ ಸಹನ್‌ ಹಾಗೂ ಸಚಿನ್‌ ಸಹೋದರರಿಗೆ ಕ್ರೀಡಾ ಇಲಾಖೆಯಿಂದ ತಲಾ 5 ಲಕ್ಷ ರೂ. ನೀಡಲಾಗುತ್ತದೆ ಎಂದು ರಹೀಂ ಖಾನ್‌ ಘೋಷಿಸಿದರು. ಶಾಸಕ ರಘುಪತಿ ಭಟ್ ಮಾತನಾಡಿ, ಕ್ರೀಡೆ ಹಾಗೂ ಆ್ಯತ್ಲೆಟಿಕ್‌ನಲ್ಲಿ ಜಿಲ್ಲೆ ಹೆಚ್ಚು ಪ್ರತಿಭೆಯನ್ನು ಹೊಂದಿದೆ. ಯುವ ಕ್ರೀಡಾ ಪ್ರತಿಭೆಗಳಿಗೆ ಕೋಚಿಂಗ್‌ ಕ್ಯಾಂಪ್‌ ವ್ಯವಸ್ಥೆ ಆಗಬೇಕು ಎಂದರು.

ಶಾಸಕ, ಸಚಿವರ ಕ್ರೀಡಾ ಸ್ಫೂರ್ತಿ
ಕ್ರೀಡಾಂಗಣ ಉದ್ಘಾಟಿಸಿದ ಬಳಿಕ ಸಚಿವ ರಹೀಂ ಖಾನ್‌ ಹಾಗೂ ಶಾಸಕ ಕೆ. ರಘುಪತಿ ಭಟ್ ಟೆನಿಸ್‌ ಆಡಿದರೆ ಸಚಿವೆ ಡಾ| ಜಯಮಾಲಾ ಕೂಡ ಸುಮಾರು 10 ನಿಮಿಷ ಆಟವಾಡಿ ಕ್ರೀಡಾ ಸ್ಫೂರ್ತಿ ಮೆರೆದರು. ಹವಾನಿಯಂತ್ರಿತ ಜಿಮ್‌ನ‌ಲ್ಲಿರಹೀಂ ಖಾನ್‌, ಡಾ| ಜಯಮಾಲಾ, ರಘುಪತಿ ಭಟ್ ಕಸರತ್ತು ನಡೆಸಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ, ಅಪರ ಮುಖ್ಯ ಕಾರ್ಯದರ್ಶಿ ಡಾ| ಕಲ್ಪನಾ, ಅಲ್ಪಸಂಖ್ಯಾಕ ನಿಗಮದ ಮಾಜಿ ಅಧ್ಯಕ್ಷ ಎಂ.ಎ. ಗಫ‌ೂರ್‌, ನಿರ್ಮಿತಿ ಕೇಂದ್ರದ ಅರುಣ್‌, ಎಡಿಸಿ ವಿದ್ಯಾ ಕುಮಾರಿ, ಟೆನಿಸ್‌ ಅಸೋಸಿಯೇಶನ್‌ ಅಧ್ಯಕ್ಷ ದೇವಾನಂದ್‌ ಉಪಸ್ಥಿತರಿದ್ದರು.

Advertisement

ಡಾ| ರೋಶನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿ ಸತೀಶ್ಚಂದ್ರ ವಂದಿಸಿದರು.

‘ಕ್ರೀಡಾ ವಿ.ವಿ. ಸ್ಥಾಪನೆಗೆ ಕ್ರಮ’
ಮಂಗಳೂರು: ಸಮ್ಮಿಶ್ರ ಸರಕಾರದ ಪ್ರಥಮ ಬಜೆಟ್‌ನಲ್ಲಿ ಘೋಷಿಸಿದ್ದ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಕ್ರೀಡಾ ಸಚಿವ ರಹೀಂ ಖಾನ್‌ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ ಪ್ರಸ್ತಾವನೆ ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆಯ ಮುಂದಿದೆ. ಉನ್ನತ ಶಿಕ್ಷಣ ಇಲಾಖೆಯ ವರದಿ ಬಂದ ಬಳಿಕ ಮುಂದಿನ ಪ್ರಕ್ರಿಯೆಗಳನ್ನು ನಡೆಸಲಾಗುವುದು. ಕ್ರೀಡಾ ವಿ.ವಿ.ಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಚಿಂತನೆ ಇದೆ ಎಂದರು.

500 ಕೋಟಿ ರೂ. ಕೋರಿಕೆ
ಕ್ರೀಡಾ ಹಾಸ್ಟೆಲ್‌ಗ‌ಳಿಗೆ ಕೋಚ್‌ಗಳ ನೇಮಕ, ಗುಣಮಟ್ಟದ ಆಹಾರ ಪೂರೈಕೆ, ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ಸಹಿತ ಕ್ರೀಡಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ರೂ. ಒದಗಿಸುವಂತೆ ಬಜೆಟ್ಪೂರ್ವ ಸಭೆಯಲ್ಲಿ ಸರಕಾರಕ್ಕೆ ಬೇಡಿಕೆ ಮಂಡಿಸಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸೌಲಭ್ಯಗಳನ್ನು ನೀಡುವ ಗುರಿಯನ್ನು ಇಲಾಖೆ ಹೊಂದಿದ್ದು ಪ್ರಥಮ ಹಂತದಲ್ಲಿ ರಾಜ್ಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ, ಪ್ರತಿ ವಿಭಾಗದಲ್ಲಿ ಸರ್ವ ಸೌಲಭ್ಯಗಳನ್ನು ಒಳಗೊಂಡ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುವುದು. ಸ್ಟೇಡಿಯಂಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ರಹೀಂ ಖಾನ್‌ ತಿಳಿಸಿದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಧನ ನೀಡಲು ಶೀಘ್ರ 5 ಕೋಟಿ ರೂ. ಬಿಡುಗಡೆಯಾಗಲಿದೆ ಎಂದವರು ಹೇಳಿದರು. ಕ್ರೀಡಾಂಗಣಗಳಲ್ಲಿ ಅನ್ಯ ಕಾರ್ಯಕ್ರಮಗಳಿಗೆ ಅನುಮತಿ ನೀಡಿದರೆ ಕ್ರೀಡಾಕೂಟಗಳಿಗೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ರಾಜ್ಯಾದ್ಯಂತ ನಿಯಮ ರೂಪಿಸಬೇಕಾಗಿದೆ ಎಂದರು.

ಯುವಕರು ಮಾದಕ ವಸ್ತುಗಳಿಗೆ ಬಲಿಯಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಯುವಕರಿಗೆ ಸೂಕ್ತ ಚಿಕಿತ್ಸೆ, ಆಪ್ತ ಸಮಾಲೋಚನೆ ಹಾಗೂ ಮಾರ್ಗದರ್ಶನ ನೀಡಲು ನಿಮ್ಹಾನ್ಸ್‌ಗೆ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಮಮತಾ ಗಟ್ಟಿ, ಎ.ಸಿ. ವಿನಯರಾಜ್‌, ಮಹಮ್ಮದ್‌ ಮೋನು, ಎನ್‌.ಎಸ್‌. ಕರೀಂ, ಈಶ್ವರ ಉಳ್ಳಾಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next