Advertisement

ಕಲ್ಲಂಗಡಿ ಬೆಳೆಗೆ ನುಸಿ ಬಾಧೆ: ಬೆಳೆಗಾರರು ಕಂಗಾಲು

06:39 PM Mar 25, 2023 | Team Udayavani |

ಕುಂದಾಪುರ: ಇಲ್ಲಿಯ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಮಾತ್ರ ಹೆಚ್ಚಾಗಿ ಬೆಳೆಯುವ ಕಲ್ಲಂಗಡಿ ಹಣ್ಣಿನ ಬೆಳೆಗೆ ಈ ಬಾರಿ ನುಸಿ ಬಾಧೆ ಹಿಂದೆಂದಿಗಿಂತ ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಂಡಿದೆ. ಇದರಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದ್ದು, ಬೆಳೆಗಾರರು ಆತಂಕ ಪಡುವಂತಾಗಿದೆ. ಬೈಂದೂರು ಹೋಬಳಿಯ ನಾಗೂರು, ಕಿರಿಮಂಜೇಶ್ವರ, ಉಪ್ಪುಂದ, ನಾಯ್ಕನಕಟ್ಟೆ, ಬಿಜೂರು, ಕೆರ್ಗಾಲು, ನಂದನವನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ಕಲ್ಲಂಗಡಿ ಬೆಳೆಗೆ ಬಹುತೇಕ ಹಾನಿಯಾಗಿದೆ. ಕೊಯ್ಲು ಬರುವ ಸಂದರ್ಭದಲ್ಲೇ ಈ ರೀತಿ ನುಸಿಬಾಧೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

Advertisement

ಏನಿದು ನುಸಿ ಬಾಧೆ ?
ನಾಗೂರಿನ ಕಲ್ಲಂಗಡಿ ಬೆಳೆಗಾರ ನರಸಿಂಹ ದೇವಾಡಿಗ ಅವರು ಹೇಳುವ ಪ್ರಕಾರ ಬಿತ್ತನೆ ಮಾಡಿ, ಕಲ್ಲಂಗಡಿ ಬಳ್ಳಿ ಮೇಲೆ ಬಂದು 35-38 ದಿನಗಳಾಗುವ ವೇಳೆ ಬಳ್ಳಿಯೇ ಸಂಪೂರ್ಣ ಬಾಡಿ ಹೋಗುತ್ತಿದೆ. ಇನ್ನೇನು ಕಲ್ಲಂಗಡಿ ಕಾಯಿ ಬಿಡಬೇಕು ಅನ್ನುವಷ್ಟರಲ್ಲಿ ಈ ರೀತಿ ಬಳ್ಳಿಯೇ ನಾಶವಾಗುತ್ತಿದೆ. ಹೀಗೆ ಆದರೆ ಬೆಳೆ ಬೆಳೆಯುವುದು ಹೇಗೆ? ಈ ರೀತಿಯ ನಷ್ಟಕ್ಕೂ ಸರಕಾರದಿಂದ ಪರಿಹಾರ ಸಿಗುವಂತಾಗಲಿ ಎಂದು ಅವರು ಒತ್ತಾಯಿಸಿದ್ದಾರೆ. ಥ್ರಿಪ್ಸ್‌ ನುಸಿ ಬಾಧೆ ಇನ್ನು ವಿಜ್ಞಾನಿಗಳ ತಂಡವು ಅಧ್ಯಯನ ನಡೆಸಿದ್ದು, ಅವರ ಪ್ರಕಾರ ಇದು ಥ್ರಿಪ್ಸ್‌ ನುಸಿಯ ಬಾಧೆಯಿಂದ ಈ ರೀತಿಯಾಗಿದೆ. ಹಗಲು ಹೆಚ್ಚು ಸೆಕೆ, ರಾತ್ರಿ ತಂಪಿನ ವಾತಾವರಣವಿರುವುದರಿಂದ ಥ್ರಿಪ್ಸ್‌ ನುಸಿ (ಬಡ್‌ ನೆಕ್ರೋಸಿಸ್‌) ವೈರಸ್‌ ರೋಗವು ವೇಗವಾಗಿ ಹರಡಲು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ವರ್ಷದಿಂದ ವರ್ಷಕ್ಕೆ ಕಡಿಮೆ ಬೈಂದೂರು, ಕುಂದಾಪುರ, ಕೋಟ, ಬ್ರಹ್ಮಾವರ ಹೋಬಳಿ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಸುಮಾರು 100ರಿಂದ 150 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯನ್ನು ಬೆಳೆಯುತ್ತಿದ್ದರು. ವರ್ಷದಿಂದ ವರ್ಷಕ್ಕೆ ಕಲ್ಲಂಗಡಿ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂದಾಜು 100 ಹೆಕ್ಟೇರ್‌ ವರೆಗೆ ಬೈಂದೂರು ಭಾಗದಲ್ಲಿಯೇ ಬೆಳೆಯುತ್ತಿದ್ದಾರೆ. ಕಿರಿಮಂಜೇಶ್ವರ ಗ್ರಾಮವೊಂದರಲ್ಲಿಯೇ ಗರಿಷ್ಠ ಸರಾಸರಿ 36.59 ಹೆಕ್ಟೇರ್‌ ಬೆಳೆಯುತ್ತಿದ್ದಾರೆ.

ತಜ್ಞರ ತಂಡ ಭೇಟಿ : ಪರಿಶೀಲನೆ ಈಗಾಗಲೇ ತೋಟಗಾರಿಕೆ ಇಲಾಖೆ ಮುತುವರ್ಜಿ ಯಲ್ಲಿ ಬ್ರಹ್ಮಾವರದ ತೋಟಗಾರಿಕೆ ಸಂಶೋಧನ ಕೇಂದ್ರದ ಕೀಟ ಶಾಸ್ತ್ರಜ್ಞ ರೇವಣ್ಣ ಆರ್‌., ರೆಮಿಡಿಯಾ ಪ್ರಸ್ಕಾ ಡಿ’ಕೋಸ್ಟಾ, ಸಸ್ಯ ರೋಗ ಶಾಸ್ತ್ರಜ್ಞೆ ಸ್ವಾತಿ ಶೆಟ್ಟಿ ವೈ., ಕುಂದಾಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶಾಂತಾ ಎಂ, ಬೈಂದೂರು ಹೋಬಳಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರವೀಣ್‌ ಅವರ ತಂಡ ನಾಗೂರು ಹಾಗೂ ನಾಯ್ಕನಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ, ಹಾನಿಗೊಳಗಾದ ಕಲ್ಲಂಗಡಿ ಬೆಳೆ ಪರಿಶೀಲಿಸಿದ್ದಾರೆ. ಈ ವೇಳೆ ವಿಜ್ಞಾನಿಗಳ ತಂಡವು ಅಧ್ಯಯನ ನಡೆಸಿ, ರೈತರಿಗೆ ಕೆಲವೊಂದು ಸಲಹೆ, ಮಾರ್ಗದರ್ಶನ ನೀಡಿದೆ.

ಬೆಳೆಗಾರರಿಗೆ ತಜ್ಞರ ಸಲಹೆ 
ಬೆಳೆಗಾರರು ನಿರಂತರವಾಗಿ ಅನೇಕ ತರಹದ ರಾಸಾಯನಿಕ ಬಳಸುತ್ತಿದ್ದು, ಆದರೆ ಈ ಥ್ರಿಪ್ಸ್‌ ವೈರಸ್‌ ನಿಯಂತ್ರಣಕ್ಕೆ ಕೀಟನಾಶಕ ಮಾತ್ರ ಸಾಕಾಗುವುದಿಲ್ಲ. ಈ ನುಸಿ ಬಾಧೆಯಿಂದ ಮುಕ್ತಿ ಸಿಗಬೇಕಾದರೆ ಸಮಗ್ರ ನಿರ್ವಹಣೆ ಅಗತ್ಯವಿದೆ. ಪ್ರಮುಖವಾಗಿ ಬೀಜೋಪಚಾರ, ಮಾಗಿ ಉಳುಮೆ ಮಾಡಿ, ನಾಟಿ ಸಮಯ ದಲ್ಲಿ ಬೇವಿನ ಹಿಂಡಿ ಮಣ್ಣಿನಲ್ಲಿ ಬೆರೆಸಬೇಕು. ಮೆಕ್ಕೆ ಜೋಳವನ್ನು ಗದ್ದೆಯ ಸುತ್ತಲೂ ತಡೆ ಬೆಳೆಯಾಗಿ ಬೆಳೆಸಬಹುದು ಅಥವಾ ಸುತ್ತಲೂ ಶೆಡ್‌ ನೆಟ್‌ ಹಾಕಬಹುದು. ಆರಂಭಿಕ ಹಂತದಲ್ಲಿ ಬೇವಿನ ಮೂಲದ ಕೀಟನಾಶಕ ಬಳಸಿ, ಬಾಧಿತ ಗಿಡಗಳನ್ನು ಬೇರು ಸಹಿತ ಕಿತ್ತು ನಾಶಪಡಿಸಿ, ಕೀಟ ಬಾಧೆ ಹತೋಟಿಗೆ ತರಬೇಕು. ನುಸಿಬಾಧೆ ಉಲ್ಬಣಗೊಂಡರೆ ರಾಸಾಯನಿಕ ಕೀಟನಾಶಕಗಳಾದ ಇಮಿಡಾಕ್ಲೋಪ್ರಿಡ್‌ 0.5 ಮಿ.ಲೀ., ಅಥವಾ ಫ್ಲೋಬೆಂಡಿಮೈಡ್‌ 0.5 ಮಿ.ಲೀ., ಅಥವಾ ಥೈಯೋಮೆಥೋಗಾಮ್‌ 0.5 ಗ್ರಾಂ. ಸಿಂಪಡಿಸಿ. ಇದರೊಂದಿಗೆ ಕೆಲವೆಡೆ ಪ್ಯುಸೆರಿಯಂ ಸೆರಗು ರೋಗದ ಲಕ್ಷಣ ಕಾಣಿಸಿದ್ದು, ಮೆಟಲಾಕ್ಸಿಲ್‌ 2 ಗ್ರಾಂ. ಅಥವಾ ಥಯೋಫಾನೇಟ್‌ 2 ಗ್ರಾಂ., ಪ್ರತಿ ಲೀ. ನೀರಿಗೆ ಬೆರೆಸಿ ಬಾಧಿತ ಗಿಡಗಳ ಬುಡಕ್ಕೆ ಸುರಿಯಬೇಕು. ಅತಿಯಾಗಿ ಬಾಧಿಸಿದ್ದರೆ ಬಳ್ಳಿಗಳನ್ನು ನಾಶಪಡಿಸಿ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next