Advertisement

ನರ್ಸಿಂಗ್‌ ಕಾಲೇಜು: ಸದನ ಸಮಿತಿ ಸಿಂಧುತ್ವ ಎತ್ತಿಹಿಡಿದ ಹೈಕೋರ್ಟ್‌

11:34 PM Jan 09, 2023 | Team Udayavani |

ಬೆಂಗಳೂರು: ರಾಜ್ಯದ ನರ್ಸಿಂಗ್‌ ಹಾಗೂ ಸಂಬಂಧಿತ ವಿಜ್ಞಾನಗಳ ಕಾಲೇಜುಗಳಿಗೆ ಮೂಲ ಸೌಕರ್ಯ ಗಳಿಲ್ಲದಿದ್ದರೂ ಅನುಮತಿ ನೀಡಿ ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ ಹೊರಡಿಸಿರುವ ಮಾರ್ಗಸೂಚಿ ಗಳನ್ನು ಉಲ್ಲಂಘಿಸಿರುವ ವಿಷಯವನ್ನು ಪರಿಶೀಲಿ ಸಲು ರಚಿಸಲಾಗಿದ್ದ ಜಂಟಿ ಸದನ ಸಮಿತಿಯ ಸಿಂಧುತ್ವ ವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

Advertisement

ಜಂಟಿ ಸದನ ಸಮಿತಿ ರಚಿಸಿರುವ ಕ್ರಮ ಸರಿ ಇದೆ ಎಂದು ಹೇಳಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಕರ್ನಾಟಕ ನರ್ಸಿಂಗ್‌ ಮತ್ತು ಆರೋಗ್ಯ ವಿಜ್ಞಾನಗಳ ನಿರ್ವಹಣೆಯ ರಾಜ್ಯ ಒಕ್ಕೂಟ, ಹೈದರಾಬಾದ್‌-ಕರ್ನಾಟಕ ನರ್ಸಿಂಗ್‌ ಮ್ಯಾನೇಜ್‌ಮೆಂಟ್‌ ಅಸೋಸಿಯೇಶನ್‌ ಮತ್ತಿತರರ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಮುಖ್ಯ ನ್ಯಾ| ಪಿ.ಬಿ. ವರಾಲೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸದನ ಸಮಿತಿಯ ಸಿಂಧುತ್ವವನ್ನು ಎತ್ತಿಹಿಡಿದಿದೆ. ಅಲ್ಲದೆ, ನರ್ಸಿಂಗ್‌ ಕಾಲೇಜುಗಳ ಮೂಲಸೌಕರ್ಯಗಳ ಕುರಿತು ಪರಿಶೀಲಿಸುವ ಅಧಿಕಾರ ಸದನ ಸಮಿತಿಗೆ ಇದೆ ಎಂದು ಆದೇಶಿಸಿದೆ.

ಸದನ ಸಮಿತಿಯನ್ನು ಕಾಲೇಜುಗಳ ಮೂಲಸೌಕರ್ಯ ಹಾಗೂ ಕಾರ್ಯ ನಿರ್ವಹಣೆ ಅಧ್ಯಯನ ಮಾಡಲು ಮಾತ್ರವೇ ರಚಿಸಲಾಗಿದೆಯೇ ಹೊರತು ಅಧಿಕಾರಿಗಳ ಕಾರ್ಯ ಗಳನ್ನು ಮೇಲ್ವಿಚಾರಣೆಗಾಗಿ ಅಲ್ಲ. ಮೂಲ ಸೌಕರ್ಯ ಇತ್ಯಾದಿಗಳ ಕುರಿತು ಅಧ್ಯಯನ ನಡೆಸುವ ನಿಟ್ಟಿನಲ್ಲಿ ಸಮಿತಿಯು ನರ್ಸಿಂಗ್‌ ಕಾಲೇಜು ಗಳಿಗೆ ಭೇಟಿ ನೀಡುವ ಅಧಿಕಾರವನ್ನು ಹೊಂದಿದೆ. ಆದರೆ ಈ ಸಮಿತಿಯು ಸಾಂವಿಧಾನಿಕ ಯೋಜನೆಯಡಿ ನ್ಯಾಯಾಂಗಕ್ಕೆ ಸೇರಿರುವ ಯಾವುದೇ ನ್ಯಾಯಮಂಡಳಿಯ ಅಧಿಕಾರ ಹೊಂದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಒಂದು ವೇಳೆ ಸದನ ಸಮಿತಿ ವರದಿ ನೀಡಿದರೆ ಅದು ಬಹಿರಂಗವಾಗಿ ಸಾರ್ವಜನಿಕರಿಗೆ ಲಭ್ಯ ವಾದಾಗ ಅವರು ಅದನ್ನು ದುರುಪಯೋಗ ಪಡಿಸಿಕೊಳ್ಳಬಹುದೆಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.
ವಿಧಾನಪರಿಷತ್ತಿನ ಕಾರ್ಯ ವಿಧಾನ ಮತ್ತು ವ್ಯವಹಾರದ ನಿಯಮ ಗಳ ನಿಯಮ 223ರ ಪ್ರಕಾರ, ಸಮಿತಿ ವರದಿ ಸಲ್ಲಿಸಿದಾಕ್ಷಣ ಅದನ್ನು ಬಹಿರಂಗಪಡಿಸುವುದಿಲ್ಲ. ಅದು ಸದನದಲ್ಲಿ ಮಂಡನೆಯಾದರೆ ಮಾತ್ರ ಅದು ಸಾರ್ವಜನಿಕ ಸೊತ್ತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಸರಕಾರದ ಪರ ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ಸದನ ಸಮಿತಿ ರಚನೆಯನ್ನು ಬಲವಾಗಿ ಸಮರ್ಥಿಸಿ ಕೊಂಡು ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 199ರ ಅನುಸಾರವೇ ಉಪಸಮಿತಿಯನ್ನು ರಚಿಸಲಾಗಿದೆ ಎಂದು ಪ್ರತಿಪಾದಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next