ಬೀದರ: ಜೀವದ ಹಂಗು ತೊರೆದು ಕೋವಿಡ್ ಸೋಂಕು ರೋಗಿಗಳ ಚಿಕಿತ್ಸೆಗಾಗಿ ದುಡಿಯುತ್ತಿರುವ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳಿಗೆ ಅಪಾಯ ಭತ್ಯೆ/ ಪ್ರೋತ್ಸಾಹ ಧನ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಶುಶ್ರೂಷಾಧಿಕಾರಿಗಳು ಸೋಮವಾರದಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ ಆರಂಭಿಸಿದ್ದಾರೆ.
ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಶುಶ್ರೂಷಾಧಿಕಾರಿಗಳು ನಗರದ ಬ್ರಿಮ್ಸ್ ಬೋಧಕ ಆಸ್ಪತ್ರೆ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ರೋಗಿಗಳಿಗೆ ಚಿಕಿತ್ಸೆಗಾಗಿ ಯಾವುದೇ ತೊಂದರೆಯಾಗದಂತೆ ಕಪ್ಪು ಪಟ್ಟಿಯೊಂದಿಗೆ ಕೆಲಸ ನಿರ್ವಹಿಸಿದರು. ಆರೋಗ್ಯ ಇಲಾಖೆ ಶುಶ್ರೂಷಾಧಿಕಾರಿ ಸೇರಿ ವೈದ್ಯರು ಮತ್ತು ಡಿ ಗ್ರೂಪ್ ನೌಕರರಿಗೆ ಸರ್ಕಾರ ಅಪಾಯ ಭತ್ಯೆಯನ್ನು ಘೋಷಿಸಿದೆ. ಆದರೆ, ಕೋವಿಡ್ ಆಸ್ಪತ್ರೆಗಳಲ್ಲಿ ಹಗಲು ರಾತ್ರಿ ಎನ್ನದೇ ರೋಗಿಗಳ ಆರೈಕೆ ಮಾಡುತ್ತಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಾಧಿಕಾರಿಗಳ ವಿಷಯದಲ್ಲಿ ತಾರತಮ್ಯ ಮಾಡಿದೆ. ಮೊದಲ ಅಲೆ ಹಂತದ ಆರು ತಿಂಗಳು ತಲಾ 5 ಸಾವಿರ ರೂ. ನಂತೆ ಮತ್ತು ಎರಡನೆ ಅಲೆ ಹಂತದ 6 ತಿಂಗಳು ತಲಾ 8 ಸಾವಿರ ರೂ.ಗಳಂತೆ ಪ್ರತಿಯೊಬ್ಬರಿಗೆ 78 ಸಾವಿರ ಪಾವತಿಸಬೇಕು ಎಂದು ಈ ವೇಳೆ ಆಗ್ರಹಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಬಿ. ಪ್ರಕಾಶ, ಜಿಲ್ಲಾಧ್ಯಕ್ಷ ವೇಣುರಾಜ್ ಜಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಮನ್ಯು, ಉಪಾಧ್ಯಕ್ಷ ಸಂತೋಷಕುಮಾರ ಸಿ., ರಾಜಶೇಖರ, ಸಹ ಕಾರ್ಯದರ್ಶಿ ಶರಣಬಸಪ್ಪ, ಕೋಶಾಧ್ಯಕ್ಷ ನರಸಿಂಗ್ ಕೆ., ಕಾರ್ಯಾಧ್ಯಕ್ಷ ಯಶವಂತ ಗಾದಗಿ, ರಾಘವೇಂದ್ರ, ಆನಂದ, ಸಂತೋಷ, ವಿಷ್ಣು ಬಿರಾದಾರ ಇನ್ನಿತರ ಶುಶ್ರೂಷಾಕಾರಿಗಳು ಇದ್ದರು.