Advertisement
ಪ್ರತೀ ಗಿಡಕ್ಕೆ ನೂರು ರೂ.ಅರಣ್ಯ ಇಲಾಖೆಯು 2017-18ನೇ ಸಾಲಿನಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಇಲಾಖೆಯಲ್ಲಿ ನೋಂದಾಯಿಸಿಕೊಂಡು ನೆಟ್ಟು ಉಳಿಸಿಕೊಂಡ ಪ್ರತಿ ಗಿಡಕ್ಕೆ ಮೊದಲ ವರ್ಷಾಂತ್ಯದಲ್ಲಿ 30 ರೂ., ಎರಡನೇ ವರ್ಷಾಂತ್ಯದಲ್ಲಿ 30 ರೂ., ಮೂರನೇ ವರ್ಷಾಂತ್ಯದಲ್ಲಿ 40 ರೂ. ನಂತೆ ಒಟ್ಟು 100 ರೂ. ಪ್ರೋತ್ಸಾಹಧನವನ್ನು ನೀಡಲಾಗುವುದು. ಒಬ್ಬ ರೈತನಿಗೆ ಗರಿಷ್ಠ 500 ಗಿಡಗಳನ್ನು ನೆಟ್ಟು ಸಂರಕ್ಷಿಸುವುದಕ್ಕೆ ಮಿತಿಯನ್ನು ಮಾಡಲಾಗಿದೆ. ಇದರಲ್ಲಿ ರೈತ ಸ್ವಂತದ್ದಾಗಿರುವ ಜಮೀನು ಹೊಂದಿರಬೇಕು. ನೆಟ್ಟ ಗಿಡವು ಸಾಯದಂತೆ ಬದುಕಿಸುವಲ್ಲಿ ಪ್ರಯತ್ನಗಳು ಇರಬೇಕು.
ಸಾಮಾಜಿಕ ಅರಣ್ಯದಿಂದಲೂ ಸಾರ್ವಜನಿಕ ವಿತರಣೆಗೆ ಗಿಡಗಳನ್ನು ನೀಡುತ್ತಿದ್ದು 88,000 ಗಿಡಗಳು ವಿತರಣೆಗೆ ಲಭ್ಯವಿದ್ದು ಈಗಾಗಲೇ ಗಿಡಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ನರೇಶ್ ತಿಳಿಸಿದ್ದಾರೆ. ಸಾಮಾಜಿಕ ಅರಣ್ಯ ಇಲಾಖೆಯು ವಲಯ ಅರಣ್ಯ ಇಲಾಖೆಯಿಂದ ನೀಡುವ ಜಾತಿವಾರು ಗಿಡಗಳ ಹೊರತಾದ ಗಿಡಗಳನ್ನು ಸಹ ಪಡೆಯಬಹುದು ಎಂದವರು ತಿಳಿಸಿದ್ದಾರೆ. ರೈತರು ಉದ್ಯೋಗ ಖಾತರಿ ಯೋಜನೆಯಡಿ ಹೊಂಡ – ಗುಂಡಿಗಳನ್ನು ಮಾಡಿ ಗಿಡಗಳನ್ನು ನೆಡುವುದಾದರೆ ಅವರಿಗೆ ಖರ್ಚು ವೆಚ್ಚ ಗ್ರಾ.ಪಂ. ಮೂಲಕ ಲಭ್ಯವಾಗಲಿದೆ. ಸಂಘಸಂಸ್ಥೆಗಳಿಗೆ ಗಿಡಗಳ ಸರಬರಾಜು ವ್ಯವಸ್ಥೆಗೆ ಕೂಡ ಇಲಾಖೆಯಿಂದ ಸೂಕ್ತ ವೆಚ್ಚವು ಲಭ್ಯವಾಗುತ್ತದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ತುಂಬೆ ನರ್ಸರಿಯಲ್ಲಿ ಗಿಡಗಳು ದೊರೆಯುತ್ತವೆ. ಬಿ.ಸಿ.ರೋಡ್ ತಾ.ಪಂ. ಹಳೆಯ ಕಟ್ಟಡದಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಿಂದ ಸೂಕ್ತ ಅರ್ಜಿ ನೀಡಿ ಗಿಡಗಳನ್ನು ಪಡೆಯಲು ಅವಕಾಶವಿದೆ ಎಂದವರು ತಿಳಿಸಿದ್ದಾರೆ.
Related Articles
ಈಗಾಗಲೇ ಮಳೆಗಾಲ ಆರಂಭವಾಗಿದ್ದು ಅನೇಕ ಕಡೆಗಳಲ್ಲಿ ಗಿಡಗಳನ್ನು ನೆಡುವ ಪ್ರಕ್ರಿಯೆ ಜಾರಿಯಲ್ಲಿದೆ. ಸರಕಾರದ ಹೊಸ ಸುತ್ತೋಲೆಯಂತೆ ಪ್ರತೀ ಗಿಡಕ್ಕೆ ಪ್ರೋತ್ಸಾಹ ಧನವನ್ನು ಮೂರು ಹಂತದಲ್ಲಿ ನೀಡಲಾಗುತ್ತದೆ. ಇದರ ಸದುಪಯೋಗ ಪಡೆಯುವಂತಾಗಬೇಕು.
– ಸುರೇಶ್, ಅರಣ್ಯಾಧಿಕಾರಿ, ಬಂಟ್ವಾಳ ವಲಯ
Advertisement