ನವದೆಹಲಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಅವರನ್ನು ಇಸ್ಲಾಂ ಧರ್ಮದ ಪ್ರಕಾರ ಕ್ಷಮಿಸಬೇಕು ಎಂದು ಜಮಾತ್ ಉಲೇಮಾ ಎ ಹಿಂದ್ ನ ಅಧ್ಯಕ್ಷ ಸುಹೈಬ್ ಖ್ವಾಸ್ಮಿ ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ;ಬಲಾಢ್ಯರಿಂದ ಕೋಟ್ಯಾಂತರ ರೂ. ಬೆಲೆ ಬಾಳುವ ಸರ್ಕಾರಿ ಆಸ್ತಿ ಲೂಟಿ : ಪ್ರತಿಭಟನೆ
ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದನ್ನು ಮುಸ್ಲಿಂ ವಿದ್ವಾಂಸರ ಸಂಘಟನೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು. ಶುಕ್ರವಾರದ ಪ್ರಾರ್ಥನೆಯ ನಂತರ ನೂಪುರ್ ಹೇಳಿಕೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆದ ನಂತರ ಜಮಾತ್ ಉಲೇಮಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಸ್ಪಷ್ಟನೆ ನೀಡಿರುವುದಾಗಿ ವರದಿ ವಿವರಿಸಿದೆ.
ಇಸ್ಲಾಂ ಧರ್ಮ ಹೇಳುವ ಪ್ರಕಾರ ನೂಪುರ್ ಶರ್ಮಾಳನ್ನು ಕ್ಷಮಿಸಬೇಕಾಗಿದೆ. ಅಷ್ಟೇ ಅಲ್ಲ ನೂಪುರ್ ಹೇಳಿಕೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಜಮಾತ್ ಉಲೇಮಾದ ಖ್ವಾಸ್ಮಿ ತಿಳಿಸಿದ್ದಾರೆ.
ಮತ್ತೊಂದೆಡೆ ನೂಪುರ್ ಶರ್ಮಾ ಅವರನ್ನು ವಜಾಗೊಳಿಸಿರುವ ಭಾರತೀಯ ಜನತಾ ಪಕ್ಷದ ನಿರ್ಧಾರವನ್ನು ಸ್ವಾಗತಿಸುವುದಾಗಿ ಜಮಾತ್ ಉಲೇಮಾ ಎ ಹಿಂದ್ ಈ ಸಂದರ್ಭದಲ್ಲಿ ತಿಳಿಸಿದೆ. ಭಾರತ ಕಾನೂನಿನ ತವರಾಗಿದೆ. ಈ ನಿಟ್ಟಿನಲ್ಲಿ ನಾವು ಕಾನೂನನ್ನು ಕೈಗತ್ತಿಕೊಳ್ಳಬಾರದು. ನಾವು ಬೀದಿಗಿಳಿದು, ನಿಯಮವನ್ನು ಉಲ್ಲಂಘಿಸಲು ಕಾನೂನು ಅವಕಾಶ ನೀಡುವುದಿಲ್ಲ ಎಂದು ಖ್ವಾಸ್ಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.