ಪಂಜಾಬ್;ಕ್ರೈಸ್ತ ಸನ್ಯಾಸಿನಿ(ನನ್) ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೋ ಮುಲಕ್ಕಳ್ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ್ದ ಪಾದ್ರಿ ಕುರಿಯಕೋಸೆ ಕಟ್ಟುಥಾರಾ ಅವರ ಶವ ದಕ್ಷಿಣ ಪಂಜಾಬ್ ನ ಜಲಂಧರ್ ನ ದಸುಯಾ ಪ್ರದೇಶದ ಸೈಂಟ್ ಮೇರಿಸ್ ಚರ್ಚ್ ನಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
67 ವರ್ಷದ ಫಾದರ್ ಕುರಿಯಾಕೋಸೆ ಅವರ ಮೃತದೇಹ ಚರ್ಚ್ ನೊಳಗೆ ಸಿಕ್ಕಿದ್ದು, ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಚೇರ್ತಾಳದಲ್ಲಿರುವ ಕುರಿಯಾಕೋಸೆ ಅವರ ಕುಟುಂಬಸ್ಥರ ಪ್ರಕಾರ, ಫಾದರ್ ಸಾವಿನ ಹಿಂದೆ ನಿಗೂಢ ರಹಸ್ಯ ಇದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಅವರು ಆತ್ಮಹತ್ಯೆಗೆ ಶರಣಾಗುವವರಲ್ಲ. ತಪ್ಪು ಚಟುವಟಿಕೆ ನಡೆಸಿದ್ದ ಬಿಷಪ್ ಫ್ರಾಂಕೋ ಮುಲಕ್ಕಳ್ ವಿರುದ್ಧ ಧೈರ್ಯ ತೋರಿ ಹೇಳಿಕೆ ನೀಡಿದ್ದರು. ಬಳಿಕ ಸಾಕಷ್ಟು ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ಹಲವಾರು ಕ್ರೈಸ್ತ ಸನ್ಯಾಸಿಯರು ಫಾದರ್ ಕುರಿಯಾಕೋಸೆ ಬಳಿ ತಾವು ಫ್ರಾಂಕೋ ಅವರಿಂದಾಗಿ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡಿದ್ದರು. ತದನಂತರ ಕುರಿಯಾಕೋಸೆ ಅವರು ಫ್ರಾಂಕೋ ಅವರನ್ನು ಪ್ರಶ್ನಿಸಿದ್ದರು. ಹೀಗಾಗಿ ಫಾದರ್ ಕುರಿಯಕೋಸೆ ಅವರ ಸಾವಿನ ಹಿಂದೆ ಷಡ್ಯಂತ್ರ ಇದೆ ಎಂದು ಸಹೋದರ ಜಾನಿ ಥೋಮಸ್ ಕುಟ್ಟುಥಾರಾ ತಿಳಿಸಿದ್ದಾರೆ.
ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣ ದೇಶ, ವಿದೇಶಗಳಲ್ಲಿ ದೊಡ್ಡ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಕೊನೆಗೆ ಪ್ರಕರಣದ ಆರೋಪಿ ಬಿಷಪ್ ಫ್ರಾಂಕೋ ಮುಲಕ್ಕಳ್ ಅನ್ನು ಪೊಲೀಸರು ಬಂಧಿಸಿದ್ದರು. ಇತ್ತೀಚೆಗೆ ಕೇರಳ ಹೈಕೋರ್ಟ್ ಬಿಷಪ್ ಫ್ರಾಂಕೋಗೆ ಷರತ್ತುಬದ್ಧ ಜಾಮೀನು ನೀಡಿತ್ತು.