ಮಹಾನಗರ : ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದರೆ, ಅತ್ತ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶವೂ ಏರಿಕೆಯಾಗುತ್ತಿದೆ. ಇದರ ನೇರ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಬೀರಿದ್ದು, ನಗರದ ಪ್ರಮುಖ ಸ್ಥಳಗಳಿಗೆ ಬರುವ ಪ್ರವಾಸಿಗರ
ಸಂಖ್ಯೆಯಲ್ಲಿ ಇಳಿಮುಖವಾಗಿವೆ.
ನಗರದ ಅತಿ ದೊಡ್ಡ ಪಾರ್ಕ್‌ನಲ್ಲಿ ಒಂದಾದ ಕದ್ರಿ ಪಾರ್ಕ್ ಬಳಿ ಇರುವ ಕಾರಂಜಿ ಪ್ರದರ್ಶನ ವೀಕ್ಷಣೆಗೆ ಈಗ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರೇ ಬರುತ್ತಿಲ್ಲ. ಇದೇ ಕಾರಣಕ್ಕೆ ಎರಡು ದಿನಗಳಿಂದ ಕಾರಂಜಿ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಕದ್ರಿ ಪಾರ್ಕ್ ಕಾರಂಜಿ ಸಂಜೆ 7 ಗಂಟೆಯಿಂದ 7.30ರ ವರೆಗೆ ಮತ್ತು ವೀಕೆಂಡ್‌ನಲ್ಲಿ 7 ಗಂಟೆಯಿಂದ 7.30, 8 ಗಂಟೆಯಿಂದ 8.30ರ ವರೆಗೆ ಪ್ರದರ್ಶನವಿರುತ್ತದೆ. ಸಾಮಾನ್ಯವಾಗಿ ಸ್ಥಳೀಯರು ಸಹಿತ ಇತರೇ ಜಿಲ್ಲೆಯ ಪ್ರವಾಸಿಗರು ಕಾರಂಜಿ ವೀಕ್ಷಣೆಗೆ ಆಗಮಿಸುತ್ತಾರೆ. ಇತ್ತೀಚೆಗೆ ಕೆಲವು ದಿನಗಳಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಿದ್ದು, 10-15ಕ್ಕಿಂತ ಹೆಚ್ಚು ಮಂದಿ ಬಂದ ದಿನ ಮಾತ್ರ ಕಾರಂಜಿ ಪ್ರದರ್ಶನವಿರುತ್ತದೆ.
ಕಾರಂಜಿ ಪ್ರದರ್ಶನ ನಡೆಯಬೇಕಾದರೆ ಸುಮಾರು 30ಕ್ಕೂ ಹೆಚ್ಚಿನ ಮೋಟರ್ ಗಳು ಚಾಲು ಆಗಬೇಕು. ಇದರಿಂದ ಸಾವಿರಾರು ರೂಪಾಯಿ ವಿದ್ಯುತ್ ದರ ಬರುತ್ತದೆ. ಕಡಿಮೆ ಮಂದಿ ಪ್ರವಾಸಿಗರು ಆಗಮಿಸಿದರೆ ವಿದ್ಯುತ್ ದರ ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಹೆಚ್ಚಿನ ಮಂದಿ ಪ್ರವಾಸಿಗರು ಕಾರಂಜಿ ವೀಕ್ಷಣೆಗೆ ಆಗಮಿಸಿದರೆ, ಪ್ರದರ್ಶನ ಎಂದಿನಂತೆ ನಡೆಸಲು ತೋಟಗಾರಿಕಾ ಇಲಾಖೆ ತೀರ್ಮಾನಿಸಿದೆ.
ಬೀಚ್‌ಗಳಲ್ಲೂ ಪ್ರವಾಸಿಗರ ಸಂಖ್ಯೆ ಕುಂಠಿತ
ನಗರದ ಪ್ರಮುಖ ಬೀಚ್‌ಗಳಾದ ಪಣಂಬೂರು ಮತ್ತು ತಣ್ಣೀರುಬಾವಿ ಬೀಚ್‌ಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗಿದೆ. ಪಣಂಬೂರು ಬೀಚ್‌ಗೆ ಸಾಮಾನ್ಯ ದಿನಗಳಲ್ಲಿ ಸುಮಾರು 7,000 ಮಂದಿ ವೀಕೆಂಡ್‌ನಲ್ಲಿ ಸುಮಾರು 20,000 ಮಂದಿ ಬರುತ್ತಾರೆ. ಆದರೆ, ಇದೀಗ ಮಾಮೂಲಿ ದಿನಗಳಲ್ಲಿ 4,000, ವೀಕೆಂಡ್‌ನಲ್ಲಿ 8,000 ಮಂದಿ ಮಾತ್ರ ಬರುತ್ತಿದ್ದಾರೆ. ಇನ್ನು, ತಣ್ಣೀರುಬಾವಿ ಬೀಚ್‌ನಲ್ಲಿ ಮಾಮೂಲಿ ದಿನಗಳಲ್ಲಿ ಸುಮಾರು 2,000 ವೀಕೆಂಡ್ ನಲ್ಲಿ ಸುಮಾರು 5,000 ಮಂದಿ ಬರುತ್ತಾರೆ. ಇದೀಗ ಮಾಮೂಲಿ ದಿನಗಳಲ್ಲಿ ಬರುವ ಪ್ರವಾಸಿಗರ ಸಂಖ್ಯೆ 1,000, ವೀಕೆಂಡ್‌ನಲ್ಲಿ 3,000ಕ್ಕೆ ಇಳಿದಿದೆ.
ನಗರದ ವಿಲ್ಲಾ, ಹೊಟೇಲ್ ಹೋಮ್ ಸ್ಟೇಗಳಲ್ಲಿ ತಂಗಲು ಪ್ರವಾಸಿಗರು ಬರುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ಬೀಚ್ ಕಡೆ ಇರುವಂತಹ ವಿಲ್ಲಾಗಳಿಗೆ ಬೇಡಿಕೆ ಹೆಚ್ಚಿರುತ್ತವೆ. ಆದರೂ ಬಿಕೋ ಎನ್ನುತ್ತಿವೆ. ಈ ಬಗ್ಗೆ ‘ಸುದಿನ’ಕ್ಕೆ ಪ್ರತಿಕ್ರಿಯಿಸಿದ ಕಂಕನಾಡಿ ಬಳಿಯ ಹೋಂಸ್ಟೇಯೊಂದರ ಲ್ಯಾನ್ಸ್‌ಲೊಟ್ ಡಿ’ಸೋಜಾ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಹೋಂಸ್ಟೇಗಳಲ್ಲಿ ತಂಗಲು ಪ್ರವಾಸಿಗರು ಬರುತ್ತಿಲ್ಲ ಎನ್ನುತ್ತಾರೆ.
ಉರಿ ಬಿಸಿಲು ಕೂಡ ಕಾರಣ
ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಪ್ರಮಾಣ ಈಗ 37 ಡಿ.ಸೆ. ದಾಟಿದ್ದು, ಮುಂದಿನ ಎಪ್ರಿಲ್-ಮೇ ತಿಂಗಳಲ್ಲಿ ಮತ್ತಷ್ಟು ಜಾಸ್ತಿಯಾಗುವ ಮುನ್ಸೂಚನೆ ಇದೆ. ಸಾಮಾನ್ಯವಾಗಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಪ್ರವಾಸಕ್ಕೆ ಬರುವವರು ಅಲ್ಲಿನ ಅನುಕೂಲಕರ ವಾತಾವರಣ ನೋಡಿಕೊಂಡು ದಿನಾಂಕ ನಿಗದಿಗೊಳಿಸುತ್ತಾರೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ತೀವ್ರತೆ ಕೂಡ ಪ್ರವಾಸಿಗರ ಸಂಖ್ಯೆ ಕುಂಠಿತಗೊಳ್ಳಲು ಕಾರಣವಾಗಿರುವ ಸಾಧ್ಯತೆಯಿದೆ. ಇನ್ನೊಂದೆಡೆ , ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯ. ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿದ್ದು, ಎಸೆಸೆಲ್ಸಿ ಪರೀಕ್ಷೆಗಳು ನಡೆಯುತ್ತಿವೆ. ಮುಂದೆ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳು ಕೂಡ ನಡೆಯಲಿವೆ. ಹೀಗಿರುವಾಗ, ಮಕ್ಕಳ ಪರೀಕ್ಷೆ ಕಾರಣದಿಂದಲೂ ಪ್ರವಾಸಿಗರ ಸಂಖ್ಯೆಯಲ್ಲಿ ಈಗ ಇಳಿಮುಖವಾಗಿದೆ ಎನ್ನಲಾಗುತ್ತಿದೆ. ಈ ನಡುವೆ, ಇನ್ನೇನು ಲೋಕಸಭೆ ಚುನಾವಣೆ ಕಾವು ಕೂಡ ಜೋರಾಗಿದ್ದು, ಇದರಿಂದಲೂ ಪ್ರವಾಸಿಗರ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಹೆಚ್ಚಿನ ಪ್ರವಾಸಿಗರು ಬಂದರೆ ಪ್ರದರ್ಶನ
ಕದ್ರಿ ಕಾರಂಜಿ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಕಡಿಮೆ ಮಂದಿ ಇರುವ ದಿನ ಕಾರಂಜಿ ಪ್ರದರ್ಶನ ಸ್ಥಗಿತಗೊಳಿಸಿದ್ದೇವೆ. ಹೆಚ್ಚಿನ ಮಂದಿ ಪ್ರವಾಸಿಗರು ಆಗಮಿಸುವ ದಿನ ಪ್ರದರ್ಶನವಿರುತ್ತದೆ.
– ಜಾನಕಿ, ತೋಟಗಾರಿಕಾ
ಇಲಾಖೆ ಹಿರಿಯ ಸಹಾಯಕಿ
ಪಿಲಿಕುಳದಲ್ಲೂ ಜನ ಕಡಿಮೆ
ಮಂಗಳೂರಿನ ಪ್ರವಾಸಕ್ಕೆಂದು ಬರುವ ಮಂದಿ ಸಾಮಾನ್ಯವಾಗಿ ಪಿಲಿಕುಳ ಶಿವರಾಮ ಕಾರಂತ ನಿಸರ್ಗದಾಮಕ್ಕೆ ಆಗಮಿಸುತ್ತಾರೆ. ಆದರೆ ಸದ್ಯ ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಇಲ್ಲಿನ ಅಧಿಕಾರಿಗಳು ಹೇಳುವ ಪ್ರಕಾರ ಸಾಮಾನ್ಯ ದಿನಗಳಲ್ಲಿ ಸುಮಾರು 7,000 ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಸದ್ಯ 3,000ದಷ್ಟು ಮಂದಿ ಮಾತ್ರ ಬರುತ್ತಿದ್ದಾರೆ.
ಟ್ಯಾಕ್ಸಿಗೂ ಬೇಡಿಕೆ ಕುಂಠಿತ
ಒಂದು ತಿಂಗಳಿನಿಂದ ನಗರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಒಂದೆಡೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಮತ್ತೂಂದೆಡೆ ಉರಿ ಬಿಸಿಲು ಕೂಡ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲು ಕಾರಣವಿರಬಹುದು.
– ನಾಗಪ್ಪ,ಟ್ಯಾಕ್ಸಿ,ಮ್ಯಾಕ್ಸಿಕ್ಯಾಬ್
ಅಸೋಸಿಯೇಶನ್ ಉಪಾಧ್ಯಕ್ಷ
ನವೀನ್ ಭಟ್ ಇಳಂತಿಲ