ಎಲ್ಲಿ ಜಾರಿತೋ ಮನವು.. ಎಂದು ಭಾವಗೀತೆಗಳಲ್ಲಿ ಎಲ್ಲರ ಮನಸ್ಸು ಜಾರಿಸಿದ ಭಾವ ಕವಿ ನೈಲಾಡಿ ಶಿವರಾಮ ಭಟ್ಟ ಲಕ್ಷೀನಾರಾಯಣ ಭಟ್ಟರಿಗಾಗಿ ಕಲೋನ್, ಸ್ಟುಟ್‌ಗಾರ್ಟ್, ಫ್ರಾಂಕ್‌ಫರ್ಟ್, ಮ್ಯೂನಿಕ್, ಬರ್ಲಿನ್, ಹ್ಯಾಂಬುರ್ಗ್, ಡ್ರೆಸ್ಡನ್ ಹೀಗೆ ಜರ್ಮನಿಯ ವಿವಿಧ ನಗರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಭಟ್ಟರ ಭಾವಧ್ಯಾನದಲ್ಲಿ ಒಂದು ಸುಂದರ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಿ ಅವರಿಗೆ ನುಡಿನಮನ ಸಲ್ಲಿಸಿದರು.
400ಕ್ಕೂ ಹೆಚ್ಚು ಭಾವಗೀತೆಗಳು, 100ಕ್ಕೂ ಹೆಚ್ಚು ಮಕ್ಕಳ ಪದ್ಯಗಳನ್ನು ನೀಡಿರುವ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ ಅವರು ಬರೆದಿರುವ ಹಾಡು, ಅವರೊಂದಿಗಿನ ಒಡನಾಟದ ಕುರಿತು ಮೆಲುಕು ಹಾಕಲಾಯಿತು.
ಹತ್ತು ವರ್ಷಗಳ ಹಿಂದೆ ಭಟ್ಟರನ್ನು ನೇರವಾಗಿ ಭೇಟಿಯಾಗಿ ಅವರ ಸರಳತೆ, ಆತಿಥ್ಯ, ಹೃದಯ ವೈಶಾಲ್ಯತೆಗೆ ಮನಸೋತ ಸಂತೋಷ್ ಅವರು ಜರ್ಮನಿ ಕನ್ನಡಿಗರನ್ನು ಒಟ್ಟುಗೂಡಿಸಿ ಕಾರ್ಯಕ್ರಮದ ಮುಂದಾಳತ್ವ ವಹಿಸಿದರು. ಕಾರ್ಯಕ್ರಮದಲ್ಲಿ “ತಾಯೆ ನಿನ್ನ ಮಡಿಲಲ್ಲಿ ಕಣ್ಣ ತೆರೆದ ಕ್ಷಣದಲ್ಲಿ’ ಎಂಬ ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಭಟ್ಟರನ್ನು ಭೇಟಿಯಾದ ಕ್ಷಣಗಳನ್ನು ಮೆಲುಕು ಹಾಕಿದರು. ಮ್ಯೂನಿಕ್ ನಗರದಿಂದ ಸವಿತಾ ಅವರು ಕಾರ್ಯಕ್ರಮ ನಿರೂಪಿಸಿ, ಭಟ್ಟರ ಬಾಲ್ಯ, ವ್ಯಾಸಂಗ, ಕವನ, ವೃತ್ತಿ ಹೀಗೆ ಅವರ ಜೀವನದ ಮಜಲುಗಳನ್ನು ವಿವರಿಸುತ್ತಾ ಕಾರ್ಯಕ್ರಮದ ಚುಕ್ಕಾಣಿ ಹಿಡಿದು ಮುನ್ನಡಿಸಿದರು.
“ಹೆಣ್ಣಾರು ಗಂಡೊಂದು’ ಎಂಬಂತೆ ಹೆಣ್ಣು ಸಂಸಾರದಲ್ಲಿ ಅದೆಷ್ಟೇ ನೋವು ಅಪಮಾನವಿದ್ದರೂ ಸಹಿಸಿ ಗಂಡನ ದುಂದುವೆಚ್ಚಕ್ಕೆ ಕತ್ತರಿ ಹಾಕಿ ಸಂಸಾರದ ದೋಣಿ ಸುಗಮವಾಗಿ ಸಾಗಲು ಹೆಂಡತಿಯೇ ಕಾರಣೀಭೂತಳು ಎಂದು ಸೊಗಸಾಗಿ ಮೂಡಿದ “ಹೆಂಡತಿಯೆಂದರೆ ಖಂಡಿತಾ ಅಲ್ಲ ದಿನವೂ ಕೊರೆಯುವ ಬೈರಿಗೆ ಭಂಡರು ಯಾರೋ ಆಡಿದ ಮಾತಿಗೆ ಬೈದವರುಂಟೆ ದೇವಿಗೆ’ ಎಂಬ ಕವನವನ್ನು ಫ್ರಾಂಕ್‌ಫರ್ಟ್ ನಿಂದ ಶೋಭಾ ಲೋಕೇಶ್ ಅವರು ವಾಚಿಸಿದರೆ, ಪ್ರಕೃತಿಯ ವಿಸ್ಮಯದೊಂದಿಗೆ ಅಧ್ಯಾತ್ಮದೆಡೆಗೆ ಕರೆದೊಯ್ಯುವ ಈ ಬಾನು, ಈ ಚುಕ್ಕಿ, ಈ ಹೂವು, ಈ ಹಕ್ಕಿ ಹಾಡನ್ನು ಡ್ರೆಸ್ಡನ್‌ನಿಂದ ಲಕ್ಷ್ಮೀ ಅವರು ಮಧುರವಾಗಿ ಎಲ್ಲರ ಮನ ಮುಟ್ಟಿಸಿದರು.
ಬರ್ಲಿನ್‌ನಿಂದ ಶ್ವೇತಾ, “ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ’ ಹಾಗೂ “ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ’ ಎಂಬ ಕವನಗಳನ್ನು ವಾಚಿಸಿದರು. ಸ್ಟುಟ್‌ಗಾರ್ಟ್‌ನಿಂದ ಚಿರಂತ್ ಅವರು ಭಟ್ಟರು ಭಾವಾನುವಾದ ಮಾಡಿರುವ “ಸಾರೆ ಜಾಹಾನ್ ಸೇ ಅಚ್ಚಾ ದ’ “ಈ ನಮ್ಮ ತಾಯ್ನಾಡು ನಿರುಪಮ ಲಾವಣ್ಯದ ಬೀಡು’ ಎಂಬ ಕನ್ನಡದ ಸಾಲುಗಳನ್ನು ಹೇಳಿದರು.
ಹ್ಯಾಂಬರ್ಗ್‌ನಿಂದ ಕಮಲಾಕ್ಷ ಅವರು “ಎಲ್ಲಿ ಅರಿವಿಗೆ ಇರದೋ ಬೇಲಿ’ ಹಾಗೂ ಷೇಕ್ಸ್ ಪಿಯರ್ ಅವರ shall I compare thee to a sommer’s day ? ಎಂಬ ಕವನದ ಭಾವಾನುವಾದ “ಎದೆಯ ಬಯಲಲ್ಲಿ ಭಾವಗಳ ಭಿತ್ತಿ ಬೆಳೆದ ಮಾಂತ್ರಿಕ’ ಎಂಬ ಕವನಗಳನ್ನು ಭಾವ ಪೂರ್ಣವಾಗಿ ಸಾದರ ಪಡಿಸಿದರು.
ಪುಟಾಣಿಗಳಾದ ಸ್ನಿಗ್ಧ ಹಾಗೂ ಅದ್ವೈತ್ ಮಕ್ಕಳ ಹಾಡುಗಳನ್ನು ಹಾಡಿ ಭಟ್ಟರಿಗೆ ಭಾವನಮನ ಕಾರ್ಯಕ್ರಮವನ್ನು ಪರಿಪೂರ್ಣಗೊಳಿಸಿದರು.
– ಶೋಬಾ ಚೌಹಾನ್, ಫಾಂಕ್‌ಫರ್ಟ್