ಹಳೆಯಂಗಡಿ: ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳಿದ ನರೇಂದ್ರ ಮೋದಿಯ ನೋಟ್ ಬ್ಯಾನ್‌ನಿಂದ ರಾಷ್ಟ್ರದಲ್ಲಿ ವರ್ಷ ಕಳೆದರೂ ಸೂತಕದ ಛಾಯೆ ಮೂಡಿದೆ. ಚಾರ್ಲ್ಸ್ ಶೋಭರಾಜ್, ಗಬ್ಬರ್‌ಸಿಂಗ್‌ನಂತವರನ್ನೇ ಮೋದಿ ಮೀರಿಸಿದ್ದು, ಇವರ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಹಳೆಯಂಗಡಿ ಮುಖ್ಯ ಬಸ್ ನಿಲ್ದಾಣದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನ. 8ರಂದು ಕೇಂದ್ರ ಸರಕಾರದ ನೋಟು ಅಮಾನ್ಯೀಕರಣದ ಕಾರ್ಯಕ್ರಮಕ್ಕೆ ಒಂದು ವರ್ಷ ಪೂರೈಸಿದ್ದರಿಂದ ಅದನ್ನು ವಿರೋಧಿಸಿ ನಡೆದ ಕರಾಳ ದಿನಾಚರಣೆಯ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.
ವಿದೇಶದಿಂದ ಕಾಳಧನಿಕರ ಹಣವನ್ನು ಮರಳಿ ದೇಶಕ್ಕೆ ತರುತ್ತೇವೆ ಎಂದು ಹೇಳಿಕೊಂಡ ಮೋದಿ, ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ, ಬಡವರಿಗೆ ಬರೆ ಹಾಕಿ ಸಿರಿವಂತರಿಗೆ ತಿಜೋರಿ ತುಂಬಿಸುವ ಪರೋಕ್ಷ ಅಭಿಯಾನವೇ ಈ ನೋಟು ಬದಲಾವಣೆಯ ನಾಟಕದ ಹಿಂದಿನ ಮಸಲತ್ತಾಗಿದೆ ಎಂದರು.
ಮೂಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ, ಜನ ಸಾಮಾನ್ಯರನ್ನು ಬಲಿ ಪಶುಮಾಡಿ ದೊಡ್ಡ ದೊಡ್ಡ ಉದ್ಯಮಿಗಳಿಗೆ ನೆರವು ನೀಡಿದ ನರೇಂದ್ರ ಮೋದಿ ನೋಟು ಅಮಾನತು ಮಾಡಿ ವರ್ಷ ಕಳೆದರು ಅದರ ಪರಿಣಾಮದಿಂದ ಇನ್ನೂ ಜನ ಸಾಮಾನ್ಯರು ಎಚ್ಚೆತ್ತುಕೊಂಡಿಲ್ಲ, ಬಿಜೆಪಿಯ ನಿಜಬಣ್ಣ ಬಯಲಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಎಚ್. ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಮೂಲ್ಕಿ, ಹಳೆಯಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ಮನ್ಸೂರ್ ಸಾಗ್, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಪಡುಪಣಂಬೂರು ಗ್ರಾಮ ಸಮಿತಿಯ ಅಧ್ಯಕ್ಷೆ ಸವಿತಾ ಶರತ್ ಬೆಳ್ಳಾಯರು, ಮೂಲ್ಕಿ ನ.ಪಂ.ಸದಸ್ಯರಾದ ವಿಮಲಾ ಪೂಜಾರಿ, ಪುತ್ತುಬಾವ, ಬಶೀರ್ ಕುಳಾಯಿ, ಅಶೋಕ್ ಪೂಜಾರ್, ಯೋಗೀಶ್ ಕೋಟ್ಯಾನ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಸದಸ್ಯರಾದ ಅಬ್ದುಲ್ ಖಾದರ್, ಅಜೀಜ್, ಅನಿಲ್ ಬಂಗೇರ, ಚಂದ್ರಶೇಖರ ಸಸಿಹಿತ್ಲು, ಚಿತ್ರಾ ಸುರೇಶ್, ಪ್ರವೀಣ್ ಸಾಲ್ಯಾನ್, ಶರ್ಮಿಳಾ ಕೋಟ್ಯಾನ್ ಉಪಸ್ಥಿತರಿದ್ದರು.