Advertisement

ಯುಜಿಸಿ: ಕನ್ನಡ ಪರೀಕ್ಷೆಗೆ ಹಿಂದಿ ಪ್ರಶ್ನೆಪತ್ರಿಕೆ

10:17 PM Dec 26, 2021 | Team Udayavani |

ಬೆಂಗಳೂರು: ವಿಶ್ವವಿದ್ಯಾನಿಲಯದ ಅನುದಾನ ಆಯೋಗವು (ಯುಜಿಸಿ) ರವಿವಾರ ನಡೆಸಿದ ರಾಷ್ಟ್ರೀಯ ಶಿಕ್ಷಕರ ಅರ್ಹತಾ (ಎನ್‌ಇಟಿ) ಕನ್ನಡ ಪರೀಕ್ಷೆ ಪ್ರಶ್ನೆಗಳನ್ನು ಹಿಂದಿಯಲ್ಲಿ ಮುದ್ರಿಸುವ ಮೂಲಕ   ಎಡವಟ್ಟು ಮಾಡಿದ್ದು, ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ.

Advertisement

ಯುಜಿಸಿ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವುದರಿಂದ ಕನ್ನಡ ಪರೀಕ್ಷೆಯಲ್ಲಿಯೂ ಹಿಂದಿ ಹೇರಿಕೆ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಕನ್ನಡ ಪರೀಕ್ಷೆಗೆ ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸಿರುವುದು ನೋಡಿ ನಮಗೆ ಆಘಾತವಾಗಿದೆ. ಪ್ರಶ್ನೆಪತ್ರಿಕೆಯನ್ನು ಹಿಂದಿಯಲ್ಲಿ ಮುದ್ರಿಸುವ ಅಗತ್ಯವೇನಿತ್ತು ಎಂದು ಅಭ್ಯರ್ಥಿಗಳು ರಾಜ್ಯಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಏನಾಗಿದೆ? :

ಯುಜಿಸಿ ಭಾಗವಾದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ರವಿವಾರ ಬೆಳಗ್ಗೆ 9ರಿಂದ 12 ಗಂಟೆ ವರೆಗೆ ಆನ್‌ಲೈನ್‌ ಮೂಲಕ “ಯುಜಿಸಿ – ಎನ್‌ಇಟಿ ಕನ್ನಡ ವಿಷಯದ ಪರೀಕ್ಷೆ’ ಆಯೋಜಿಸಿತ್ತು. ಈ ಪೈಕಿ ಮೊದಲ ಪತ್ರಿಕೆಯು 50 ಪ್ರಶ್ನೆಗಳಿಗೆ ಮತ್ತು ಎರಡನೇ ಪತ್ರಿಕೆಯು 100 ಪ್ರಶ್ನೆಗಳನ್ನು ನೀಡಲಾಗಿತ್ತು. ಇದರಲ್ಲಿ 2ನೇ ಪತ್ರಿಕೆಯಲ್ಲಿ ಕೇವಲ 10 ಪ್ರಶ್ನೆಗಳು ಮಾತ್ರ ಕನ್ನಡದಲ್ಲಿ ಮುದ್ರಣಗೊಂಡಿದ್ದು, ಉಳಿದ 90 ಪ್ರಶ್ನೆಗಳು ಹಿಂದಿಯಲ್ಲಿ ಮುದ್ರಣಗೊಂಡಿದ್ದವು. ಹಿಂದಿಯಲ್ಲಿ ಪ್ರಶ್ನೆಗಳನ್ನು ನೋಡಿದ ಅಭ್ಯರ್ಥಿಗಳು ತಬ್ಬಿಬ್ಬಾಗಿದ್ದಾರೆ.

ತಾಂತ್ರಿಕ ಸಮಸ್ಯೆ :

Advertisement

ಪರೀಕ್ಷೆ ಮಧ್ಯಾಹ್ನ 12 ಗಂಟೆಗೆ ಮುಗಿಯಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಹಿಂದಿ ಪ್ರಶ್ನೆಗಳು ಬಂದಿದ್ದು, ಅದನ್ನು ಸರಿಪಡಿಸುವುದಾಗಿ  ತಿಳಿಸಿ ಮಧ್ಯಾಹ್ನ 2 ಗಂಟೆವರೆಗೂ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿಯೇ ಕುಳಿತುಕೊಳ್ಳುವಂತೆ ಮನವಿ ಮಾಡಲಾಗಿತ್ತು. ಆದರೂ ಸರಿಯಾಗದಿದ್ದಾಗ,  ಅಭ್ಯರ್ಥಿಗಳು ಹೊರಗೆ ಬಂದು ಯುಜಿಸಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪರೀಕ್ಷೆ  ಮುಂದೂಡಿಕೆ :

ರವಿವಾರ ಸಂಜೆ 5 ಗಂಟೆ ಸುಮಾರಿಗೆ ಯುಜಿಸಿ ಸ್ಪಷ್ಟನೆ ನೀಡಿದ್ದು, ತಾಂತ್ರಿಕ ಸಮಸ್ಯೆಗಳಿಂದ ಪರೀಕ್ಷೆ ಯನ್ನು ಮುಂದೂಡಲಾಗಿದೆ. ಶೀಘ್ರದಲ್ಲಿಯೇ ನೂತನ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ನಿರಂತರವಾಗಿ ಯುಜಿಸಿ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರುವಂತೆ ಎನ್‌ಟಿಎ ಪರೀಕ್ಷಾ ವಿಭಾಗದ ಹಿರಿಯ ನಿರ್ದೇಶಕಿ ಡಾ| ಸಾಧನಾ ಪರಾಷರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next