ಧಾರವಾಡ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ನೀಡುವ ಪ್ರಸಕ್ತ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಚೆಂಬೆಳಕಿನ ಕವಿ ನಾಡೋಜ ಡಾ| ಚೆನ್ನವೀರ ಕಣವಿ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಗುರುವಿನ ಸಮಾನ ಸ್ಥಾನದಲ್ಲಿರುವ ಕವಿ ಕಣವಿ ಅವರಿಗೆ ಪ್ರಶಸ್ತಿ ನೀಡುವ ಭಾಗ್ಯ ಲಭಿಸಿರುವುದು ನನ್ನ ಸುದೈವ. ಇದು ನನ್ನ ಜೀವಮಾನದ ಮಧುರ ಕ್ಷಣ. ತುಂಬಿದ ಕೊಡ ಎಂದಿಗೂ ತುಳುಕದು ಎಂಬಂತೆ ಕಣವಿ ಅವರ ವ್ಯಕ್ತಿತ್ವ ಅವರನ್ನು ತುಂಬಿದ ಕೊಡವನ್ನಾಗಿಸಿದೆ. ನೆರೆ ಸಂತ್ರಸ್ತರಿಗೆ ಒಂದು ಲಕ್ಷ ರೂ.ವನ್ನು ಸಿಎಂ ಪರಿಹಾರ ನಿಧಿಗೆ ನೀಡಿರುವ ಕಣವಿ ಅವರ ಸರಳ ಸಜ್ಜನಿಕೆ ಯುವ ಪೀಳಿಗೆಗೆ ಮಾದರಿ ಎಂದರು.
ಅಧಿಕಾರ, ಅಂತಸ್ತು-ಐಶ್ವರ್ಯ, ಆಯಸ್ಸು ಶಾಶ್ವತವಲ್ಲ. ಜೀವನದಲ್ಲಿ ಸಾಧನೆಗಳ ಮೂಲಕವೇ ನಮ್ಮ ಹೆಜ್ಜೆ ಗುರುತು ದಾಖಲಿಸಬೇಕು. ಇಂತಹವರ ಸಾಲಿನಲ್ಲಿ ಕಣವಿ ಸಲ್ಲುತ್ತಾರೆ. ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳೂ ದೊರೆಯುವಂತೆ ಮಾಡುವ ಧ್ವನಿಗೆ ನಮ್ಮ ಸಹಕಾರ ಇರಲಿದೆ. ಸಾರಿಗೆ ಸಾಹಿತ್ಯ ಭವನದಂತಹ ಕಸಾಪ ಬೇಡಿಕೆ ಈಡೇರಿಸುವತ್ತಲೂ ಧ್ವನಿ ಇರಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಸರಳ ಸಜ್ಜನಿಕೆಯ ಹಿರಿಯ ಕವಿಗೆ ಪ್ರಶಸ್ತಿ ನೀಡಿದ್ದರಿಂದ ಪ್ರಶಸ್ತಿ ಮೌಲ್ಯವೂ ಹೆಚ್ಚಿದೆ. ಅವರ ಸಾಹಿತ್ಯಿಕ ಸೇವೆಗೆ ರಾಷ್ಟ್ರಮಟ್ಟದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಲಭಿಸಿದರೆ ಆ ಪ್ರಶಸ್ತಿಯ ಮೌಲ್ಯವೂ ಹೆಚ್ಚಳ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು ಎಂದರು.
Advertisement
ನಗರದ ಆಲೂರು ಭವನದಲ್ಲಿ ಸೋಮವಾರ ಜರುಗಿದ ಕಾರ್ಯಕ್ರಮದಲ್ಲಿ 7 ಲಕ್ಷ 1 ರೂ. ನಗದು ಒಳಗೊಂಡ ಪ್ರಶಸ್ತಿಯನ್ನು ಡಿಸಿಎಂ ಲಕ್ಷಣ ಸವದಿ ಅವರು ಡಾ| ಕಣವಿ ಅವರಿಗೆ ಪ್ರದಾನ ಮಾಡಿದರು. ತಲಾ 25 ಸಾವಿರ ನಗದು ಒಳಗೊಂಡ ಮಯೂರವರ್ಮ ಸಾಹಿತ್ಯ ಪ್ರಶಸ್ತಿಯನ್ನು ಕೆ.ಆರ್. ಸೌಮ್ಯ ಹಾಗೂ ಶರಣು ಹುಲ್ಲೂರು ಅವರಿಗೆ ಪ್ರದಾನ ಮಾಡಲಾಯಿತು.
Related Articles
Advertisement
ಕಸಾಪ ಅಧ್ಯಕ್ಷ ಡಾ| ಮನು ಬಳಿಗಾರ ಮಾತನಾಡಿ, ಕಣವಿ ಅವರ ತವರೂರಿನಲ್ಲಿಯೇ ಪ್ರಶಸ್ತಿ ನೀಡಿರುವ ಸವಿ ನೆನಪಿಗಾಗಿ ಸಾರಿಗೆ ಸಾಹಿತ್ಯ ಭವನ ಧಾರವಾಡದಲ್ಲಿ ನಿರ್ಮಾಣ ಮಾಡಬೇಕು. ಇದರೊಂದಿಗೆ ಬೆಂಗಳೂರಿನಲ್ಲಿ ಸಾರಿಗೆ ಸಾಂಸ್ಕೃತಿಕ ಭವನ ನಿರ್ಮಾಣ ಆಗಬೇಕಿದ್ದು, ಸಾರಿಗೆ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಾರಿಗೆ ಸಚಿವರು ಸಹಕಾರ ನೀಡುವಂತೆ ಮನವಿ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ಕಣವಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡರಿಗೆ ಅವಕಾಶ ನೀಡುವುದಾಗಿ ಹೇಳಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ಹುಸಿ ಆಗಿದೆ. ಹೀಗಾಗಿ ಇಲ್ಲಿಯ ಸಂಸದರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರಿಗೆ ಅವಕಾಶ ಸಿಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಅವಳಿನಗರದಲ್ಲಿರುವ ಕನ್ನಡ ಪರ ಟ್ರಸ್ಟ್‌ಗಳ ಅಧ್ಯಕ್ಷರ ಸಭೆ ಕೈಗೊಂಡು ಚರ್ಚೆ ನಡೆಸಿ, ಸಾಹಿತ್ಯ ಚಟುವಟಿಕೆಗಳಿಗೆ ಧನಸಹಾಯ ಮಾಡಬೇಕು. ಧಾರವಾಡದ ಸಾಹಿತ್ಯ ಸಂಭ್ರಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಮಲ್ಲಿಕಾರ್ಜುನ ಮನಸೂರ ಕಲಾಭವನದ ಬಾಡಿಗೆ ಕಡಿಮೆ ಮಾಡಿ ಕನ್ನಡ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದರು.
ವಿಮರ್ಶಕ ಡಾ| ಜಿ.ಎಂ. ಹೆಗಡೆ ಅಭಿನಂದನಾ ನುಡಿಗಳನ್ನಾಡಿದರು. ವ.ಚ. ಚನ್ನೇಗೌಡ, ಡಾ| ಲಿಂಗರಾಜ ಅಂಗಡಿ ಇನ್ನಿತರರಿದ್ದರು.
ಪರಿಹಾರ ನಿಧಿಗೆ 1 ಲಕ್ಷ ನೀಡಿದ ಕಣವಿ:
7 ಲಕ್ಷ 1 ರೂ. ನಗದು ಒಳಗೊಂಡ ಪ್ರಶಸ್ತಿ ಸ್ವೀಕರಿಸಿದ ಬಳಿಕ ಡಾ| ಕಣವಿ ಅವರು, ನೆರೆ ಸಂತ್ರಸ್ತರಿಗಾಗಿ 1 ಲಕ್ಷ ರೂ. ಚೆಕ್‌ನ್ನು ಸಚಿವ ಜಗದೀಶ ಶೆಟ್ಟರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಿದರು.